ಗುರುವಾರ , ಏಪ್ರಿಲ್ 15, 2021
26 °C
ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಉಪವಿಭಾಗಾಧಿಕಾರಿ ನಾಗರಾಜ್‌ ಸಲಹೆ

‌ಜನಸಂಖ್ಯೆ ನಿಯಂತ್ರಣಕ್ಕೆ ವಿವಾಹ ವಯಸ್ಸು ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸಮತೋಲನದ ಬದುಕು ಕಟ್ಟಿಕೊಳ್ಳಲು ಜನಸಂಖ್ಯಾ ಸ್ಫೋಟ ನಿಲ್ಲಿಸಬೇಕು. ಇಲ್ಲವಾದರೇ ಉದ್ಯೋಗ, ಆಹಾರ ಮತ್ತು ವಸತಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಎಚ್ಚರಿಸಿದರು.

ನಗರದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ ಹಾಗೂ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಹಾರದ ಸಮಸ್ಯೆ ಉಲ್ಬಣಗೊಂಡು ಆರ್ಥಿಕತೆ ಮತ್ತು ಅಭಿವೃದ್ಧಿಗೂ ತೊಡಕಾಗಲಿದೆ. ಹೀಗಾಗಿ ಜನಸಂಖ್ಯಾ ನಿಯಂತ್ರಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಜನಸಂಖ್ಯೆ ನಿಯಂತ್ರಣಕ್ಕಾಗಿ ಹೆಣ್ಮಕ್ಕಳ ವಿವಾಹದ ವಯಸ್ಸು 18 ರಿಂದ 21ಕ್ಕೆ ಹಾಗೂ ಗಂಡಿಗೆ 21 ರಿಂದ 25 ವರ್ಷಕ್ಕೆ ಹೆಚ್ಚಿಸಬೇಕು. ಈ ಬಗ್ಗೆ ಕಟ್ಟುನಿಟ್ಟಾಗಿ ಕಾಯ್ದೆ ಮಾಡಬೇಕಾದ ಅನಿವಾರ್ಯತೆ ಇದೆ. ಹೆಣ್ಣು ಮಕ್ಕಳಿಗೆ ಕೃಷಿ ಜಮೀನಿನ ಮಾಲೀಕತ್ವ, ಆಸ್ತಿಯ ಮೇಲಿನ ಹಕ್ಕು, ಸೇರಿದಂತೆ ಎಲ್ಲಾ ಹಂತದಲ್ಲೂ ಸಮಾನತೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್, ಪ್ರತಿ ಸೆಕೆಂಡಿಗೆ 30 ಮಕ್ಕಳ ಜನನ, ಪ್ರತಿ ಗಂಟೆಗೆ 1,768, ಪ್ರತಿ ದಿನಕ್ಕೆ 42,434 ಹಾಗೂ ಪ್ರತಿ ತಿಂಗಳು 12 ಲಕ್ಷ ಹಾಗೂ ವರ್ಷಕ್ಕೆ ಒಂದೂವರೆ ಕೋಟಿ ಮಕ್ಕಳ ಜನನವಾಗುತ್ತಿದೆ. ಆದರೆ, ಮರಣ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿವರಿಸಿದರು.

ಇದೇ ರೀತಿ ಜನಸಂಖ್ಯೆ ಹೆಚ್ಚುತ್ತಿದ್ದರೆ ಯಾರಿಗೂ ಭೂಮಿ ಮೇಲೆ ಜಾಗವಿಲ್ಲದಂತೆ ಆಗುತ್ತದೆ. ಚೀನಾ ದೇಶವನ್ನು ಭಾರತ ಹಿಂದಿಕ್ಕಲಿದೆ. ಹೀಗಾಗಿ ಜನಸಂಖ್ಯಾ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಅಧ್ಯಕ್ಷ ಎಚ್.ಪಿ.ಮೋಹನ್ ಮಾತನಾಡಿ, ಭೂ ಮಂಡಲಕ್ಕೆ 1 ಸಾವಿರ ಕೋಟಿ ಜನಸಂಖ್ಯೆ ನಿಭಾಯಿಸುವಷ್ಟು ಶಕ್ತಿ ಹೊಂದಿದೆ. ಈಗಾಗಲೇ 777 ಕೋಟಿ ಯಷ್ಟು ಜನಸಂಖ್ಯೆಯನ್ನು ವಿಶ್ವ ಹೊಂದಿದೆ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಭೂಮಂಡಲವು ಅಪಾಯದ ಅಂಚಿಗೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಆವರಣದಲ್ಲಿ ಗಣ್ಯರು ಸಸಿ ನೆಟ್ಟು ನೀರು ಎರೆದರು.

ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಟಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಅನುಗನಾಳು ಕೃಷ್ಣಮೂರ್ತಿ, ನಿರ್ದೇಶಕರಾದ ವೈ.ಎಸ್.ವೀರಭದ್ರಪ್ಪ, ಶಬೀರ್ ಅಹಮ್ಮದ್, ಅಮ್ಜದ್ ಖಾನ್, ಆರ್.ಟಿ.ನಾರಾಯಣ ಸ್ವಾಮಿ, ಮಂಜಪ್ಪ ಮತ್ತು ನಿರ್ಮಲಾ, ಸಂಚಾಲಕ ಕೃಷ್ಣಪ್ಪ, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ಡಾ.ಸುರೇಖ, ಉಪನ್ಯಾಸಕರಾದ ವಿಜಯ ಪಾಟೀಲ್, ಲೀಲಾವತಿ, ಪುಟ್ಟರತ್ನ, ಸತೀಶ್ ಚಂದ್ರ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.