ಆಲೂರು: ಪಟ್ಟಣ ಪಂಚಾಯಿತಿಯಲ್ಲಿ ಕೇವಲ ಒಂದು ಸ್ಥಾನ ಹೊಂದಿದ್ದರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ–ಜೆಡಿಎಸ್ ಮೈತ್ರಿಗೆ ಮತ್ತೊಮ್ಮೆ ಮುಖಭಂಗ ಉಂಟಾಗಿದೆ.
ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆ ತಾಹೇರಾಬೇಗಂ ಸರ್ವರ್ ಪಾಷಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜೆಡಿಎಸ್‌ನ ಜಯಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣ ಪಂಚಾಯಿತಿಯಲ್ಲಿ 11 ಸದಸ್ಯರಿದ್ದು, ಜೆಡಿಎಸ್‌ನ ಒಬ್ಬ ಸದಸ್ಯರು ನಿಧನರಾಗಿದ್ದಾರೆ. ತಾಹೇರಾಬೇಗಂ ಕಾಂಗ್ರೆಸ್ ಪಕ್ಷದ ಏಕೈಕ ಸದಸ್ಯೆಯಾಗಿದ್ದಾರೆ. ಉಳಿದಂತೆ 4 ಜೆಡಿಎಸ್, 2 ಬಿಜೆಪಿ ಮತ್ತು 3 ಪಕ್ಷೇತರ ಸದಸ್ಯರು ಹಾಜರಾಗಿದ್ದರು. ಆದರೆ ಪಕ್ಷೇತರ ಸದಸ್ಯ ತೌಫಿಕ್ ತಟಸ್ಥವಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ತಾಹೇರಾಬೇಗಂ ಮತ್ತು 10ನೇ ವಾರ್ಡಿನ ಜೆಡಿಎಸ್ ಸದಸ್ಯೆ ಬಿ.ಪಿ. ರಾಣಿ ನಾಮಪತ್ರ ಸಲ್ಲಿಸಿದ್ದರು. ತಾಹೇರಾಬೇಗಂ ಅವರಿಗೆ ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಇಬ್ಬರು ಬಿಜೆಪಿ, ಇಬ್ಬರು ಪಕ್ಷೇತರರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ನ ಜಯಮ್ಮ ಸೇರಿದಂತೆ ಏಳು ಮತಗಳು ಲಭ್ಯವಾದವು. ಹೀಗಾಗಿ ತಾಹೀರಾ ಬೇಗಂ ಅಧ್ಯಕ್ಷರಾಗಿ ಆಯ್ಕೆಯಾದರು
ತಹಶೀಲ್ದಾರ್ ಸಿ.ಪಿ. ನಂದಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಶಿವಮೂರ್ತಿ, ಕಸಬಾ ಸೊಸೈಟಿ ಅಧ್ಯಕ್ಷ ಶಾಂತಕೃಷ್ಣ, ಮುಖಂಡರಾದ ಜಿ.ಆರ್. ರಂಗನಾಥ್, ಮುರಳಿ ಮೋಹನ್, ಎಚ್.ಪಿ. ಮೋಹನ್, ರಂಗಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಬೆಂಬಲಿಗರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
‘ಜೆಡಿಎಸ್ ಪಕ್ಷದಿಂದ ವಿಪ್ ಜಾರಿ ಮಾಡಿದ್ದರೂ ಸದಸ್ಯೆ ಜಯಮ್ಮ ವಿಪ್ ಉಲ್ಲಂಘಿಸಿ ಮತದಾನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಮಂಜೇಗೌಡ ತಿಳಿಸಿದ್ದಾರೆ.
‘ಬಿಜೆಪಿ ವತಿಯಿಂದ ಇಬ್ಬರು ಪುರುಷ ಸದಸ್ಯರು ಮಾತ್ರ ಇದ್ದರು. ಮಹಿಳಾ ಸದಸ್ಯರು ಇರಲಿಲ್ಲ. ಆದರೂ ಇವರಿಗೆ ಎನ್.ಡಿ.ಎ ಬೆಂಬಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ಜೆಡಿಎಸ್ ಸದಸ್ಯೆಯೊಬ್ಬರು ಕಾಂಗ್ರೆಸ್ ಬೆಂಬಲಿಸಿದರು’ ಎಂದು ಶಾಸಕ ಸಿಮೆಂಟ್ ಮಂಜುನಾಥ ಹೇಳಿದರು.
ಮೈತ್ರಿಯಂತೆ 4 ಜೆಡಿಎಸ್ 2 ಬಿಜೆಪಿ ಮತ್ತು ಶಾಸಕರು ಸೇರಿದ್ದರೆ ಮೈತ್ರಿಗೆ ಗೆಲುವು ಆಗುತ್ತಿತ್ತು. ಶಾಸಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಇದರಿಂದ ಸೋಲು ಉಂಟಾಯಿತು.-ಕೆ.ಎಸ್. ಮಂಜೇಗೌಡ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ
ಜೆಡಿಎಸ್ ಸದಸ್ಯರೊಬ್ಬರು ಪಕ್ಷದಿಂದ ಹೊರ ಹೋಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಹೀಗಾಗಿ ನಾನು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಶ್ಯಕತೆ ಇರಲಿಲ್ಲ.-ಸಿಮೆಂಟ್ ಮಂಜು, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.