ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು: ಹೆಚ್ಚಿದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು, ವರಿಷ್ಠರಿಗೆ ತಲೆನೋವಾದ ಆಯ್ಕೆ

ಐದೂ ಮಂದಿಯಿಂದ ಪೈಪೋಟಿ
Last Updated 21 ಮಾರ್ಚ್ 2023, 6:30 IST
ಅಕ್ಷರ ಗಾತ್ರ

ಬೇಲೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದಿದ್ದ ಬಿಜೆಪಿಯಲ್ಲಿ ಈ ಭಾರಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಒಬ್ಬರಿಗಿಂತ ಒಬ್ಬರು ಪ್ರಬಲರಾಗಿದ್ದು, ಯಾರಿಗೆ ಟಿಕೆಟ್‌ ನೀಡುವುದು ಎನ್ನುವುದು ಬಿಜೆಪಿ ವರಿಷ್ಠರಿಗೆ ತಲೆನೋವಾಗಿದೆ. ಯಾರಿಗೇ ಟಿಕೆಟ್‌ ಕೊಟ್ಟರೆ, ಬಂಡಾಯ ಬಿಸಿ ಅನುಭವಿಸಬೇಕು ಎನ್ನುವ ಆತಂಕವೂ ಕಾಡುತ್ತಿದೆ.

ಕಳೆದ ಬಾರಿ ಟಿಕೆಟ್‌ಗಾಗಿ ಕೊರಟಿಕೆರೆ ಪ್ರಕಾಶ್ ಮತ್ತು ಎಚ್.ಕೆ.ಸುರೇಶ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ಎಚ್.ಕೆ.ಸುರೇಶ್ ಅಭ್ಯರ್ಥಿಯಾಗಿದ್ದು, ಎರಡನೇ ಸ್ಥಾನ ಪಡೆದಿದ್ದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಕೊರಟಿಕೆರೆ ಪ್ರಕಾಶ್, ಎಚ್.ಕೆ.ಸುರೇಶ್ ಪರ ನಿಂತು ಜವಾಬ್ದಾರಿ ನಿರ್ವಹಿಸಿದರು. ಎಚ್.ಕೆ.ಸುರೇಶ್ ಚುನಾವಣೆಯಲ್ಲಿ ಸೋತರೂ, ಕ್ಷೇತ್ರ ಬಿಡದೆ ಸಂಘಟನೆಯಲ್ಲಿ ತೊಡಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಹಾರದ ಕಿಟ್ ಕೊಡುವುದರ ಜೊತೆಗೆ ವಿವಿಧ ಕೆಲಸಗಳನ್ನು ನಿರ್ವಹಿಸಿದ್ದಾರೆ. ಈ ಬಾರಿಯೂ ನಾನೇ ಅಭ್ಯರ್ಥಿ. ನಾನು ಶಾಸಕನಾಗುವುದು ಶತಸಿದ್ಧ ಎನ್ನುತ್ತಿರುವ ಸುರೇಶ್‌, ದೀಪಾವಳಿ ಉಡುಗೊರೆಯಾಗಿ ಸೀರೆ, ಕುಕ್ಕರ್ ಹಂಚಿದ್ದಾರೆ.

ಸಜ್ಜನ ವ್ಯಕ್ತಿ ಎನಿಸಿಕೊಂಡಿರುವ ಕೊರಟಿಕೆರೆ ಪ್ರಕಾಶ್, ‘ಮೂರು ಬಾರಿ ನನಗೆ ಟಿಕೆಟ್ ಸಿಗದೇ ಅನ್ಯಾಯವಾಗಿದ್ದು, ಕ್ಷೇತ್ರದಲ್ಲಿ ಪಕ್ಷ ಕಟ್ಟಲು ಶ್ರಮಿಸಿದ್ದೇನೆ. ಈ ಬಾರಿ ಟೆಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎನ್ನುತ್ತಿದ್ದಾರೆ. 2018 ರಲ್ಲಿ ಆಕಾಂಕ್ಷಿಯಾಗಿದ್ದ ಸುರಭಿ ರಘು, ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಈ ಬಾರಿಯೂ ಆಕಾಂಕ್ಷಿಯಾಗಿದ್ದಾರೆ.

2018 ರ ಚುನಾವಣೆಯ ಮತ್ತೊಬ್ಬ ಆಕಾಂಕ್ಷಿ ಸಂತೋಷ್ ಕೆಂಚಾಂಬ ಕೂಡ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದು, ರಾಷ್ಟ್ರಧರ್ಮ ಸಂಘಟನೆಯಡಿಯಲ್ಲಿ ಹಿಂದೂಪರ ಹೋರಾಟ, ಗ್ರಾಮಗಳ ಶುಚಿತ್ವ ಸೇರಿದಂತೆ ವಿವಿಧ ಸೇವಾ ಕಾರ್ಯ ಮಾಡುತ್ತಿದ್ದಾರೆ.

ಇನ್ನು ಸಿದ್ದೇಶ್ ನಾಗೇಂದ್ರ ಸಹ ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡುತ್ತಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಎಂ.ಎಸ್.ನಾಗೇಂದ್ರ ಪ್ರತಿಷ್ಠಾನದ ಮೂಲಕ ಸಾಕಷ್ಟು ಕೆಲಸ ಮಾಡುವುದರ ಜೊತೆಗೆ ಹಲವಾರು ದೇಗುಲಗಳಿಗೆ ಹೆಚ್ಚಿನ ಖರ್ಚು ಮಾಡಿ, ಕೇಳಿದ ಕೆಲಸ ಮಾಡಿಸಿ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಬೇಲೂರು ಉತ್ಸವ ಎಂಬ ಸಂಗೀತ ಕಾರ್ಯಕ್ರಮವನ್ನು ನಡೆಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪಕ್ಷದ ಹಿರಿಯ ಮುಖಂಡ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್ ಸಹ ಆಕಾಂಕ್ಷಿಯಾಗಿದ್ದು, ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದಾಗ ತಾಲ್ಲೂಕು ಪಂಚಾಯಿತಿ ಮತ್ತು ಎಪಿಎಂಸಿಯಲ್ಲಿ ಪಕ್ಷದ ಅಧಿಕಾರ ಗದ್ದುಗೆ ಹಿಡಿಯಲು ಶ್ರಮಿಸಿದರು. ರೈತಪರ ಹೋರಾಟದಿಂದ ಬಂದಿರುವ ರೇಣುಕುಮಾರ್ ಉತ್ತಮ ವಾಗ್ಮಿಯೂ ಹೌದು. ರಾಜ್ಯ ನಾಯಕರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಇವರಿಗೆ, ಪಕ್ಷದ ನಿಷ್ಠೆಯ ಕೋಟಾದಡಿ ಟಿಕೆಟ್‌ ಸಿಗಬಹುದು ಎನ್ನುವ ನಿರೀಕ್ಷೆ ಇದೆ. ಆದರೆ, ಆರ್ಥಿಕ ಸಬಲತೆ ಹೊಂದಿಲ್ಲದಿರುವುದು ಮುಳ್ಳುವಾಗಬಹುದು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಬಿಜೆಪಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಗೆಂಡೇಹಳ್ಳಿ ನಂದಕುಮಾರ್ ಸಹ ಆಕಾಂಕ್ಷಿಯಾಗಿದ್ದಾರೆ. ಎಚ್.ಕೆ.ಸುರೇಶ್ ಉತ್ತಮವಾಗಿ ಸಂಘಟನೆ‌ ಮಾಡಿದರೂ, ಮೂಲ ಕಾರ್ಯಕರ್ತರನ್ನು ಕಡಗಣಿಸಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ.

ಟಿಕೆಟ್ ಸಿಕ್ಕರೂ ಇತರೆ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಗೆಲುವು ಅಷ್ಟು ಸುಲಭವಲ್ಲ ಎಂಬ ಮಾತುಗಳು ಕಾರ್ಯಕರ್ತರಿಂದ ಕೇಳಿ ಬರುತ್ತಿವೆ.

*
ಈ ಬಾರಿ ಬೇಲೂರು ಕ್ಷೇತ್ರದ ಟಿಕೆಟ್ ಸಿಗುವ ನಂಬಿಕೆ ಇದೆ. ಅದರ ಬಗ್ಗೆ ಹೆಚ್ಚು ಗಮನ ನೀಡದೇ ಜನರ ಸೇವೆ ಮತ್ತು ಪಕ್ಷ ಸಂಘಟನೆಯಲ್ಲಿ ನಿರತನಾಗಿದ್ದೇನೆ.
-ಎಚ್.ಕೆ.ಸುರೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

*
ನಾನು 20 ವರ್ಷದಿಂದ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕಾಗಿ ದುಡ್ಡಿದಿದ್ದೇನೆ. ಸ್ಥಳೀಯ ಆಕಾಂಕ್ಷಿಯಾಗಿದ್ದೇನೆ. ಆದ್ದರಿಂದ ಈ ಬಾರಿ ನನಗೆ ಟಿಕೆಟ್ ನೀಡಬೇಕು.
-ಕೊರಟಿಕೆರೆ ಪ್ರಕಾಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ

*
ನಾನು ಪಕ್ಷದ ಶಿಸ್ತಿನ ಸಿಪಾಯಿ. ಇದುವರೆಗೂ ಪಕ್ಷ ನನಗೆ ಸಾಕಷ್ಟು ಅವಕಾಶ ನೀಡಿದೆ. ಈಗಲೂ ಪಕ್ಷ ಏನು ಸೂಚಿಸುತ್ತದೆ ಅದರಂತೆ ನಡೆದುಕೊಳ್ಳುತ್ತೇನೆ.
- ಬೆಣ್ಣೂರು ರೇಣುಕುಮಾರ್, ಆಕಾಂಕ್ಷಿ

*
ಸಂಘದ ಪರಿಪಾಠದಿಂದ ಬಂದವನು. ಶಿಸ್ತುಬದ್ಧವಾದ ಸಂಸ್ಕಾರ ರೂಢಿಸಿಕೊಂಡಿದ್ದೇನೆ. ಪಕ್ಷ ಸಂಘಟನೆ, ಜನಸೇವೆಗೆ ದುಡಿಯುತ್ತಿದ್ದೇನೆ. ಅವಕಾಶ ಕೊಟ್ಟರೇ ಜನರ ಸೇವೆ ಮಾಡುತ್ತೇನೆ.
-ಸಂತೋಷ್ ಕೆಂಚಾಂಬ, ಆಕಾಂಕ್ಷಿ

*
ಕ್ಷೇತ್ರದಲ್ಲಿ ಜೆಡಿಎಸ್ ಮಣಿಸಲು ಬಿಜೆಪಿಯಿಂದ ವೀರಶೈವರಿಗೆ ಟಿಕೆಟ್ ನೀಡಿದರೆ ಅನುಕೂಲ. ಈ ದೃಷ್ಟಿಯಿಂದ ನನಗೆ ಆದ್ಯತೆ ನೀಡಬೇಕು. ಬಿಜೆಪಿ ಗೆಲ್ಲಿಸುವುದೇ ನನ್ನ ಗುರಿ.
-ಸಿದ್ದೇಶ್ ನಾಗೇಂದ್ರ, ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT