ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಮಳೆ: ಬೆಳೆಗಳಿಗೆ ತೊಂದರೆ

ಮುಸುಕಿನ ಜೋಳ ಕಟಾವು ಕಷ್ಟ, ಶುಂಠಿಗೆ ಕೊಳೆ ರೋಗ
Last Updated 23 ಸೆಪ್ಟೆಂಬರ್ 2020, 3:21 IST
ಅಕ್ಷರ ಗಾತ್ರ

ಅರಕಲಗೂಡು: ಕಳೆದ ಒಂದು ವಾರದಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿದೆ.

ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದ್ದರೆ, ಮುಸುಕಿನ ಜೋಳದ ಬೆಳೆಯ ಕಟಾವಿಗೆ ತೊಂದರೆಯಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಮುಸುಕಿನ ಜೋಳವನ್ನು ತಾಲ್ಲೂಕಿನಲ್ಲಿ ಈ ಬಾರಿ 11,800 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.

ಬಹಳಷ್ಟು ರೈತರು ಆಲೂಗಡ್ಡೆ, ತಂಬಾಕು ಬೆಳೆ ಬಿಟ್ಟು ಮುಸುಕಿನ ಜೋಳ ಬೆಳೆದಿದ್ದರು. ಹೀಗಾಗಿ ಬೆಳೆ ಪ್ರದೇಶದ ವಿಸ್ತೀರ್ಣದಲ್ಲೂ ಹೆಚ್ಚಳವಾಗಿತ್ತು. ಉತ್ತಮವಾಗಿ ಫಸಲು ಬಂದಿತ್ತು. ಆಗಸ್ಟ್ ತಿಂಗಳಿನಲ್ಲಿ ಬಿದ್ದ ಬಾರಿ ಮಳೆಗೆ 650 ಹೆಕ್ಟೇರ್‌ನಷ್ಟು ಮುಸುಕಿನ ಜೋಳದ ಬೆಳೆಗೆ ಹಾನಿಯಾಗಿತ್ತು. ಈಗ ಬೆಳೆಯ ಕಟಾವಿನ ಹಂತದಲ್ಲಿ ಬೀಳುತ್ತಿರುವ ಮಳೆ ರೈತರನ್ನು ಮತ್ತಷ್ಟು ಚಿಂತೆಗೆ ದೂಡಿದೆ.

‘ಬೆಳೆ ನೀರು ಕುಡಿದು ಹಾಳಾಗುವ ಅಪಾಯ ಎದುರಾಗಿದೆ. ಮಳೆ ನಿಂತು ಒಂದು ವಾರ ಸತತವಾಗಿ ಬಿಸಿಲು ಬಂದಲ್ಲಿ ಜೋಳದ ಕಟಾವಿಗೆ ಅನುಕೂಲವಾಗಲಿದೆ. ಇಲ್ಲದೆ ಇದೇ ರೀತಿ ಮಳೆ ಮುಂದುವರಿದಲ್ಲಿ ಬೆಳೆ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಸ್ಥಿತಿ ಉಂಟಾಗಲಿದೆ’ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಶುಂಠಿ ಬೆಳೆಗೆ ಉತ್ತಮ ಬೆಲೆ ದೊರಕಿದ ಹಿನ್ನೆಲೆಯಲ್ಲಿ ಈ ಬಾರಿ ಶುಂಠಿ ಬೆಳೆಯುವವರ ಸಂಖ್ಯೆ ಹೆಚ್ಚಿತ್ತು. ಪ್ರತಿವರ್ಷ 600 ರಿಂದ 800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿದ್ದ ಶುಂಠಿ ಬೆಳೆಯನ್ನು ಈ ಬಾರಿ 2,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ನಿರಂತರವಾಗಿ ಬೀಳುತ್ತಿರುವ ಮಳೆ ಮತ್ತು ಶೀತದ ವಾತಾವರಣದಿಂದ ಶುಂಠಿ ತಾಕುಗಳಲ್ಲಿ ನೀರು ನಿಂತು ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಈ ಮಧ್ಯೆ ಬೆಲೆಯೂ ತೀವ್ರವಾಗಿ ಕುಸಿದಿದ್ದು ರೈತರನ್ನು ಆತಂಕಕ್ಕೆ ತಳ್ಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT