ಭಾನುವಾರ, ಜೂನ್ 26, 2022
27 °C
ಗೊರೂರಿನ ಹೇಮಾವತಿ ಡ್ಯಾಂ ರಕ್ಷಣೆಗೆ ಕೈಗಾರಿಕಾ ಭದ್ರತೆ ಪಡೆ ಸಿಬ್ಬಂದಿ ನಿಯೋಜನೆ

ಹಾಸನ: ಹೇಮಾವತಿ ಜಲಾಶಯಕ್ಕೆ ಕೆಎಸ್‌ಐಎಸ್‌ಎಫ್ ಕಣ್ಗಾವಲು, ಕಟ್ಟುನಿಟ್ಟಿನ ತಪಾಸಣೆ

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯ ಜೀವನದಿ ಗೊರೂರಿನ ಹೇಮಾವತಿ ಜಲಾಶಯ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ನಿಯೋಜಿಸಿದೆ.

ವಿಮಾನ ನಿಲ್ದಾಣಗಳಲ್ಲಿ ಸುರಕ್ಷತಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ನೀಡುವ ತರಬೇತಿಯನ್ನು ಈ ತಂಡ ಪಡೆದಿದ್ದು, ಹದ್ದಿನ ಕಣ್ಣಿಟ್ಟು ಭದ್ರತಾ ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ. ಪೊಲೀಸ್‌ ಅಧಿಕಾರಿ ಒಳಗೊಂಡಂತೆ ಯಾರೇ ಬಂದರೂ ತಪಾಸಣೆಗೆ ಒಳಪಡಿಸಲಾಗುತ್ತದೆ.

ಬೆದರಿಕೆ ಕರೆ, ಉಗ್ರರ ದಾಳಿ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಹೇಮಾವತಿ ಜಲಾಶಯ ಯೋಜನೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಹಾಗಾಗಿ ಸರ್ಕಾರ ಆಂತರಿಕ ಭದ್ರತಾ ವಿಭಾಗದಿಂದ ಜಲಾಶಯ ಭದ್ರತೆಗಾಗಿ ಕೆಎಸ್‌ಐಎಸ್‌ಎಫ್‌ ಪಡೆ ನಿಯೋಜಿಸಿದೆ. ಇನ್‌ಸ್ಪೆಕ್ಟರ್, ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್, ಸಹಾಯ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್, 19 ಕಾನ್‌ಸ್ಟೆಬಲ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಡೋರ್‌ಫ್ರೇಮ್ ಮೆಟಲ್‌ ಡಿಟೆಕ್ಟರ್‌ (ಡಿಎಂಎಂಡಿ) ಹಾಗೂ ಸ್ಕ್ಯಾನಿಂಗ್‌ ಯಂತ್ರದ ಜತೆಗೆ ಎಸ್‌ಎಲ್‌ಆರ್ (ಸೆಲ್ಫ್‌ ಲೋಡಿಂಗ್ ರೈಫಲ್) ಒದಗಿಸಲಾಗಿದೆ.

ಪ್ರವಾಸಿಗರು ಸೇರಿದಂತೆ ಯಾರೂ ಕೂಡಾ ಸುಲಭವಾಗಿ ಜಲಾಶಯ ಪ್ರವೇಶಿಸುವಂತಿಲ್ಲ. ಎಲ್ಲಾ ರೀತಿಯ ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧ. ಅಪಾಯಕಾರಿ ವಸ್ತು ಪತ್ತೆ ಹಚ್ಚು ಸಂಬಂಧ ಲಗ್ಗೇಜ್ ಸ್ಕ್ರೀನಿಂಗ್ ನಡೆಯಲಿದೆ.

ಜಲಾಶಯ ಮುಂಭಾಗಕ್ಕಷ್ಟೇ ಸಾರ್ವಜನಿಕ ಪ್ರವೇಶಕ್ಕೆ ಕಲ್ಪಿಸಿದ್ದು, ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜಲಾಶಯ ಮೇಲ್ಭಾಗದಲ್ಲಿ ಅನುಮತಿ ಪಡೆದವರ ಹೊರತಾಗಿ ಉಳಿದೆಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿದೆ.

ರಾಜ್ಯದಲ್ಲಿರುವ ಸೂಕ್ಷ್ಮ ಸ್ಥಾವರ, ವಿಮಾನ ನಿಲ್ದಾಣ (ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಹೊರತು ಪಡಿಸಿ), ವಿಧಾನಸೌಧ, ವಿಕಾಸಸೌಧ, ರಾಜಭವನ, ಕೇಂದ್ರ ಕಾರಾಗೃಹ ಗಳು, ಅಣೆಕಟ್ಟೆಗಳಿಗೆ ಕೆಎಸ್‌ಐಎಸ್‌ಎಫ್‌ ಭದ್ರತೆ ಒದಗಿಸಲಾಗಿದೆ.

ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಹೇಮಾವತಿ ಜಲಾಶಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಗುರುತಿನ ಚೀಟಿ ಇದ್ದವರು ಮಾತ್ರ ಜಲಾಶಯದ ಮೇಲ್ಭಾಗ ಸೇರಿದಂತೆ ಎಲ್ಲೆಡೆ ಕರ್ತವ್ಯ ನಿಮಿತ್ತ ಸಂಚರಿಸಬಹುದಾಗಿದೆ.

2008ರಲ್ಲಿ ಮುಂಬೈ ದಾಳಿ ಹಿನ್ನೆಲೆ ಯಲ್ಲಿ ರಾಜ್ಯದಲ್ಲಿಯೂ ಸಂಭಾವ್ಯ ದಾಳಿ ತಡೆಗೆ ರಾಜ್ಯ ಕೈಗಾರಿಕಾ ಭದ್ರತಾ ಸಿಬ್ಬಂದಿ ನಿಯೋಜಿಲಾಗಿದೆ.

*
ಹೇಮಾವತಿ ಜಲಾಶಯ ಸುರಕ್ಷತೆ ದೃಷ್ಟಿಯಿಂದ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ಸರ್ಕಾರ ನಿಯೋಜಿಸಿದೆ.
-ಆರ್.ಶ್ರೀನಿವಾಸ್‌ ಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು