ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ: ಸೌಕರ್ಯಗಳಿಲ್ಲದ ತರಕಾರಿ ಮಾರುಕಟ್ಟೆ

ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೊರತೆ: ಕೊಳೆತ ತರಕಾರಿ ದುರ್ವಾಸನೆ
ಪೂಜಾರು ರಮೇಶ್
Published 18 ಮೇ 2024, 5:12 IST
Last Updated 18 ಮೇ 2024, 5:12 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನ ರೈತರು ಹಾಗೂ ವರ್ತಕರಿಗೆ ಅನೂಕೂಲ ಆಗಲೆಂದು ನಗರ ಹೊರವಲಯದ ಗೀಜಿಹಳ್ಳಿ ಸಮೀಪ ನಿರ್ಮಾಣ ಮಾಡಿರುವ ತರಕಾರಿ ಮಾರುಕಟ್ಟೆ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ರೈತರು ಹಾಗೂ ವರ್ತಕರಿಗೆ ಬೇಸರ ಮೂಡಿಸಿದೆ.

ಮುರಿದಿರುವ ವಿದ್ಯುತ್ ಕಂಬ ಹಾಗೂ ಗೇಟ್‌ಗಳು, ಮಾರುಕಟ್ಟೆಗೆ ಬರುವ ವ್ಯಾಪಾರಸ್ಥರು, ರೈತರು ಮತ್ತು ವರ್ತಕರನ್ನು ಸ್ವಾಗತಿಸುತ್ತವೆ. ಮುಂದೆ ಪ್ರವೇಶಿಸಿದರೆ, ಪಕ್ಕದಲ್ಲಿ ಸುರಿದಿರುವ ಕೊಳೆತ ತರಕಾರಿಗಳು ಬೀರುವ ದುರ್ವಾಸನೆ, ಹೈಟೆಕ್ ಮಾರುಕಟ್ಟೆಯ ಅವ್ಯವಸ್ಥೆಯನ್ನು ಪ್ರದರ್ಶಿಸುತ್ತಿದೆ.

ನೀರಿನ ವ್ಯವಸ್ಥೆ ಇದೆಯಾದರೂ ಶೌಚಾಲಯದ ನಿರ್ವಹಣೆ ಇಲ್ಲದೇ ಇರುವುದರಿಂದ ಮಾರುಕಟ್ಟೆಯ ಆವರಣವೇ ಬಯಲು ಶೌಚಾಲಯವಾಗಿ ಮಾರ್ಪಟ್ಟಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಮಾರುಕಟ್ಟೆ ಆವರಣದಲ್ಲಿ ಅಲ್ಲಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ಹೋಗಿವೆ. ಕೆಲವೆಡೆ ಸಿಸಿಟಿವಿ ಕ್ಯಾಮೆರಾಗಳೇ ಮಾಯವಾಗಿವೆ.

ನಗರದ ಸಂತೆ ಮೈದಾನದಲ್ಲಿ ನಡೆಯುತ್ತಿದ್ದ ಸಗಟು ತರಕಾರಿಯ ವ್ಯಾಪಾರ, ಸ್ಥಳ ಬದಲಾಯಿಸಿಕೊಂಡರೂ ಮೂಲಸೌಕರ್ಯಗಳ ಕೊರತೆಯ ಜೊತೆಗೆ ಇತರೆ ಸಮಸ್ಯೆಗಳು ಬೆನ್ನು ಬಿಡದೇ ರೈತರು ಹಾಗೂ ವರ್ತಕರನ್ನು ಕಾಡುತ್ತಿವೆ.

ಸಮಸ್ಯೆ ಇಷ್ಟಿದ್ದರೂ ಚುನಾಯಿತ ಚುನಾಯಿತ ಜನಪ್ರತಿನಿಧಿಗಳು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಹಾಗೂ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿತ್ಯವೂ ತರಕಾರಿ ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯಗಳು ಇಲ್ಲದಾಗಿದೆ. ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

ಅರಸೀಕೆರೆ ಹೊರವಲಯದ ಗೀಜಿಹಳ್ಳಿ ಸಮೀಪ ನಿರ್ಮಾಣ ಮಾಡಿರುವ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆದಿರುವುದು.
ಅರಸೀಕೆರೆ ಹೊರವಲಯದ ಗೀಜಿಹಳ್ಳಿ ಸಮೀಪ ನಿರ್ಮಾಣ ಮಾಡಿರುವ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆದಿರುವುದು.
ಮಾರುಕಟ್ಟೆ ಆವರಣ ವಿಶಾಲವಾಗಿದೆ. ಆದರೆ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಾರುಕಟ್ಟೆಗೆ ಬರುವ ರೈತರಿಗೆ ತೊಂದರೆಯಾಗುತ್ತಿದೆ.
ಬೈರೇಶ್ ಟೊಮ್ಯಾಟೋ ಬೆಳೆಗಾರ
ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಇಲ್ಲ. ಕೊಳೆತ ತರಕಾರಿಗಳು ದುರ್ವಾಸನೆ ಬೀರುತ್ತಿವೆ. ಸಂಬಂಧಪಟ್ಟವರು ಕನಿಷ್ಠ ಈ ಕೊಳೆತ ತರಕಾರಿಯನ್ನು ಇಲ್ಲಿಂದ ಹೊರ ಸಾಗಿಸಬೇಕು.
ಬಿ.ಕೆ. ಯೋಗೀಶಾಚಾರ್ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ
ಇನ್ನೂ ಒಂದು ವರ್ಷದವರೆಗೆ ಗುತ್ತಿಗೆದಾರರೇ ಮಾರುಕಟ್ಟೆ ಆವರಣದ ನಿರ್ವಹಣೆ ಮಾಡಬೇಕು ಎಂಬ ನಿರ್ದೇಶನವಿದ್ದು ಸಮಸ್ಯೆ ಪರಿಹರಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು.
ಸಿದ್ದರಂಗ ಸ್ವಾಮಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT