ಹಾಸನ | ಗ್ರಾಮಕ್ಕೆ ಬಂದ ಒಂಟಿ ಸಲಗ: ಕಾಡಾನೆಗೂ ಎಸ್ಕಾರ್ಟ್

ಹಾಸನ: ಸಕಲೇಶಪುರ ತಾಲ್ಲೂಕಿನ ಉದೇವಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾಡಾನೆಯೊಂದು ಸಂಚರಿಸಿದ್ದು, ಅರಣ್ಯ ಇಲಾಖೆಯ ವಾಹನ ಆನೆಯ ಮುಂಭಾಗ ಧ್ವನಿವರ್ಧಕದ ಮೂಲಕ ಜನರಿಗೆ ತಿಳಿವಳಿಕೆ ನೀಡುತ್ತ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಒಂದೆಡೆ ಅರಣ್ಯ ಇಲಾಖೆ ಧ್ವನಿವರ್ಧಕದ ಮೂಲಕ ಎಷ್ಟೇ ಪ್ರಚಾರ ನೀಡಿದರೂ, ಸಾರ್ವಜನಿಕರು ಮಾತ್ರ ಆನೆಯ ಹಿಂದೆಯೇ ನಡೆದುಕೊಂಡು ಬಂದಿದ್ದು, ಮಲೆನಾಡು ಭಾಗದಲ್ಲಿ ಜನರಿಗೆ ಕಾಡಾನೆಗಳ ಭಯವೇ ಇಲ್ಲದಂತಾಗಿದೆ.
ಕೆಲವರು ಈ ವಿಡಿಯೋವನ್ನು ಟ್ರೊಲ್ ಮಾಡಿದ್ದು, ಕಾಡಾನೆ ಸಂಚರಿಸಲು ಅರಣ್ಯ ಇಲಾಖೆ ಎಸ್ಕಾರ್ಟ್ ರೀತಿ ಕಾರ್ಯನಿರ್ವಹಿಸಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ಕಾಡಾನೆಯೊಂದು ಪೊಲೀಸ್ ಠಾಣೆಯ ಎದುರು ಬಂದು ನಿಂತು ಹೋದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಠಾಣೆಯ ಎದುರು ಕೆಲಕಾಲ ನಿಂತಿದ್ದ ಆನೆ, ರಸ್ತೆಯಲ್ಲಿ ಹಾದು ಹೋಗಿದೆ. ಕಾಡಾನೆ ಸಂಚರಿಸುತ್ತಿರುವ ವಿಡಿಯೊ ಅನ್ನು ಸ್ಥಳೀಯರ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜನನಿಬಿಡ ಪ್ರದೇಶ, ಪ್ರಮುಖ ರಸ್ತೆಗಳಲ್ಲಿ ಕಾಡಾನೆಗಳು ಸಂಚರಿಸುತ್ತಿವೆ. ಈಚೆಗಷ್ಟೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬಾರಿ ಆನೆ ಬಂದಿದ್ದು, ಇದೀಗ ಗ್ರಾಮಗಳ ರಸ್ತೆಯಲ್ಲೂ ನಿರ್ಭಯವಾಗಿ ಸಂಚರಿಸುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.