ಹಾಸನ: ಜೀವನಾಂಶಕ್ಕೆ ದಾವೆ ಹೂಡಿದ್ದ ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದು, ಪ್ರಕರಣ ಸಂಬಂಧ ಆರೋಪಿ ಜಗದೀಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಬೇಲೂರು ತಾಲ್ಲೂಕು ಯಗಶೆಟ್ಟಿಹಳ್ಳಿ ಗ್ರಾಮದ ಜಗದೀಶ್ ಅವರ ಪತ್ನಿ ಶೀಲಾ(42) ಕಾಣೆಯಾಗಿರುವ ಸಂಬಂಧ ಪುತ್ರಿ ವಿನುತಾ ಅವರು ಸೆ. 8ರಂದು ದೂರು ನೀಡಿದ್ದರು. ತನಿಖೆ ಕೈಗೊಂಡ ವೇಳೆ ಪೊಲೀಸರಿಗೆ ಸೆ.9 ರಂದು ಆರೋಪಿ ಜಗದೀಶ್ ಮನೆಯ ಹಿಂಭಾಗದ ನಿವಾಸಿ ರಾಜಣ್ಣ ಅವರ ಜಮೀನಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಸಿಕ್ಕಿತ್ತು ಎಂದು ವಿವರಿಸಿದರು.
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಸೆ. 7ರಂದು ಸಂಜೆ 5 ಗಂಟೆಯ ಸಮಯದಲ್ಲಿ ಶೀಲಾ ಅವರು ಮನೆ ಮುಂದೆ ಧಾನ್ಯ ತರುತ್ತಿದ್ದರು. ಆಗ ಶೀಲಾ ಪತಿಯ ಜಗದೀಶ್ ರೀತಿಯಲ್ಲಿ ಕಾಣುವ ಒಬ್ಬ ವ್ಯಕ್ತಿ ಹೆಗಲ ಮೇಲೆ ಟವಲ್ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದು, ಶೀಲಾ ಅವರ ಬಳಿ ಮಾತನಾಡಿದ್ದಾನೆ. ಈ ವೇಳೆ ಹಿಂದಿನಿಂದ ಟವಲ್ ಮೂಲಕ ಶೀಲಾ ಕುತ್ತಿಗೆಗೆ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ಕೊಲೆ ಮಾಡಿರುವುದನ್ನು ಮರೆಮಾಚಲು ಜಗದೀಶ್ ಮತ್ತು ಇದೇ ಗ್ರಾಮದ ವಾಸಿ ನಿರ್ವಾಣಯ್ಯ ಇಬ್ಬರು ಸೇರಿ, ಶವವನ್ನು ಜೋಳದ ಹೊಲಕ್ಕೆ ಎಳೆದುಕೊಂಡು ಹೋಗಿದ್ದು, ನಂತರ ಆಟೋದಲ್ಲಿ ತೆಗೆದುಕೊಂಡು ಗ್ರಾಮದಿಂದ ಸುಮಾರು ಒಂದೂವರೆ ಕಿ.ಮೀ. ದೂರದ ಆರೋಪಿಯ ಜಮೀನಿನ ತೆರೆದ ಬಾವಿಯಲ್ಲಿ ಎಸೆದಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಹೇಳಿದರು.
ಸಿಸಿಟಿವಿ ಪರಿಶೀಲನೆ ಮಾಡಿದಾಗಲೂ ಮೃತಳ ಪತಿ ಜಗದೀಶ್ ಆರೋಪಿ ಎಂದು ತಿಳಿದುಬಂದಿದ್ದು, ಈತನ ವಿರುದ್ಧ ಮಗಳು ವಿನುತ ಸೆ. 9ರಂದು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಮುಖ ಆರೋಪಿ ಪತಿ ಜಗದೀಶ್‌ನನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಇತರರು ಭಾಗಿಯಾಗಿರುವ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಂತರ ಗೊತ್ತಾಗಲಿದೆ ಎಂದು ಹೇಳಿದರು.
ಜಗದೀಶ್ ಅವರ ಪುತ್ರ ಕೋವಿಡ್-19 ಸಂದರ್ಭದಲ್ಲಿ ಮೃತಪಟ್ಟ ನಂತರ ಕುಟುಂಬದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಗಳು ನಡೆಯುತ್ತಿದ್ದು, ಇತರ ಕಾರಣಗಳಿಗೆ ಮನಸ್ತಾಪ ಉಂಟಾಗಿ ಕೊಲೆಗೆ ಕಾರಣವಾಗಿರುವ ಶಂಕೆ ಇದೆ ಎಂದು ಹೇಳಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಡಿವೈಎಸ್ಪಿ ಲೋಕೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಸುಬ್ರಹ್ಮಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.