ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ಕೆ ಮಾಡಿ, ಆನೆ ಕಾರಿಡಾರ್ ಮಾಡ್ತೇನೆ: ಎ.ಮಂಜು ಭರವಸೆ

ಬಿಜೆಪಿ ಅಭ್ಯರ್ಥಿ ಮಂಜು ಮನವಿ; ಪ್ರಧಾನಿ, ಸಂಸದ, ಸಚಿವರಾದರೂ ಗೌಡರು ಅಭಿವೃದ್ಧಿ ಮಾಡಿಲ್ಲ –ಟೀಕೆ
Last Updated 4 ಏಪ್ರಿಲ್ 2019, 17:25 IST
ಅಕ್ಷರ ಗಾತ್ರ

ಸಕಲೇಶಪುರ: ‘ರಾಜಕೀಯವಾಗಿ, ಆರ್ಥಿಕವಾಗಿ ಹಾಸನ ಉಳಿಯಲು ಕುಟುಂಬ ರಾಜಕಾರಣ ದೂರವಾಗಬೇಕು’ ಎಂದು ಬಿಜೆಪಿ ಅಭ್ಯರ್ಥಿ ಎ ಮಂಜು ಅಭಿಪ್ರಾಯಪಟ್ಟರು.

ಪಟ್ಟಣದ ರಾಜಬೀದಿಯಲ್ಲಿ ಗುರುವಾರ ರೋಡ್‌ ಷೋ ನಡೆಸಿದ ನಂತರ ಹಳೆ ಬಸ್ಸುನಿಲ್ದಾಣ ಮುಂಭಾಗ ರಸ್ತೆ ಬದಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ, ಸಚಿವರಾಗಿ ಅಧಿಕಾರ ಅನುಭವಿಸಿದ್ದರೂ ಜಿಲ್ಲೆಯನ್ನು ಅಭಿವೃದ್ದಿ ಮಾಡಿಲ್ಲ. ಎರಡೂವರೆ ವರ್ಷ ಸಿ.ಎಂ ಆಗಿದ್ದ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಮಾಡಿದ್ದಾರೆ’ ಎಂದು ಹೋಲಿಕೆ ಮಾಡಿದರು.

ಗೌಡರ ಕುಟುಂಬದವರು ದಲಿತ ಪರ ಎನ್ನುತ್ತಾರೆ. ಸಕಲೇಶಪುರ –ಆಲೂರು–ಕಟ್ಟಾಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ 6 ಬಾರಿ ಶಾಸಕರಾಗಿದ್ದಾರೆ. ಅವರಿಗೆ ಮಂತ್ರಿ ಆಗುವ ಅರ್ಹತೆ ಇಲ್ಲವೆ? ಅಧಿಕಾರಕ್ಕೆ ಬರುವವರೆಗೆ ಜಾತ್ಯತೀತರು. ಇವರ ನಾಟಕ ತಿಳಿದಿದ್ದು ಜನ ಪಾಠ ಕಲಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ 1999ರಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತ್ತು. ಈಗ 2019 ರಲ್ಲಿ ಇತಿಹಾಸ ಮರುಕಳಿಸುತ್ತದೆ. 9ರ ಸಂಖ್ಯೆ ಜೆಡಿಎಸ್‌ಗೆ ಸೋಲು ತಂದುಕೊಡುತ್ತದೆ ಎಂದು ತಿಳಿಸಿದರು.

ಆನೆ ಕಾರಿಡಾರ್‌: ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ಪ್ರಾಣ, ಬೆಳೆ ಹಾನಿ ತಪ್ಪಿಸಲು ಕೇಂದ್ರದಿಂದ ಶಾಶ್ವತ ಪರಿಹಾರ ರೂಪಿಸುವುದು ಮೊದಲ ಆಧ್ಯತೆ. ‘ಮಂತ್ರಿಯಾಗಿದ್ದಾಗಲೆ ಆನೆ ಕಾರಿಡಾರ್‌ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಲಾಗಿತ್ತು. ನನ್ನನ್ನು ಆಯ್ಕೆ ಮಾಡಿ. ಕಾರಿಡಾರ್‌ ನಿರ್ಮಿಸುತ್ತೇನೆ’ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ನವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಪ್ರಚಾರ ನಡೆಸಿ ಎಂದರು.

‘ಪ್ರಜ್ವಲ್‌ ರೇವಣ್ಣ 9.78 ಕೋಟಿ ಆದಾಯಕ್ಕೆ ಹಸು ಕಟ್ಟಿದ್ದೇನೆ ಎಂದು ತೋರಿಸಿದ್ದಾರೆ. ಹಾಲಿನಲ್ಲಿ ದುಡ್ಡು ಬಂದಿರುವುದು ನಿಜ, ಆದರೆ ಹಸು ಕಟ್ಟಿರುವುದರಿಂದ ಬಂದಿಲ್ಲ, ಕೆಎಂಎಫ್‌ನಿಂದ ಬಂದಿದೆ’ ಎಂದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ಬಿ.ಎಸ್‌.ಪ್ರತಾಪ್‌, ಮಾಜಿ ಶಾಸಕ ಬಿ.ಆರ್‌.ಗುರುದೇವ್‌, ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಜೈ ಮಾರುತಿ ದೇವರಾಜ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ವೇತಾ ಪ್ರಸನ್ನ, ಸದಸ್ಯ ಸಿಮೆಂಟ್ ಮಂಜು, ಪಕ್ಷದ ಮುಖಂಡರಾದ ಡಾ.ಎಚ್‌.ಆರ್‌.ನಾರಾಯಣಸ್ವಾಮಿ, ಅವರೇಕಾಡು ಪೃಥ್ವಿ, ಶಣ್ಮುಖ, ಜಂಬರಡಿ ಲೋಹಿತ್‌, ದೀಪಕ್‌, ದಯಾನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT