ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಗಾಂಜಾ ಪ್ರಕರಣ, 39 ಮಂದಿ ಬಂಧನ

ಕೇರಳ, ಮೈಸೂರು ವ್ಯಕ್ತಿಗಳಿಗೆ ಮುಂದುವರಿದ ಶೋಧ
Last Updated 25 ಸೆಪ್ಟೆಂಬರ್ 2020, 13:11 IST
ಅಕ್ಷರ ಗಾತ್ರ

ಹಾಸನ: ಅಕ್ರಮ ಗಾಂಜಾ ಬೆಳೆ ಪತ್ತೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಸಕ್ತ ವರ್ಷ ಈವರೆಗೆ 39 ಮಂದಿಯನ್ನು ಬಂಧಿಸಲಾಗಿದ್ದು, ಡ್ರಗ್ಸ್‌ ಪೆಡ್ಲರ್‌ಗಳಲ್ಲದೆ ಗ್ರಾಹಕರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಎಸ್‌ಪಿ ಶ್ರೀನಿವಾಸ್‌ ಗೌಡ ಹೇಳಿದರು.

ನೂರಾರು ಜನರ ಹೆಸರು ಹಾಗೂ ಸಂಘ, ಸಂಸ್ಥೆಗಳ ಮೊಬೈಲ್‌ ನಂಬರ್‌ ಸಹ ಸಿಕ್ಕಿದೆ. ಅದರಲ್ಲಿ ಕೆಲವರ ಮೊಬೈಲ್‌ ಬಂದ್‌ ಆಗಿದ್ದು, ತನಿಖೆ ಮುಂದುವರಿದಿದೆ. ಹಳೇಬೀಡು, ಅರಸೀಕೆರೆ, ಬೇಲೂರು ಭಾಗದಲ್ಲಿ ಗಾಂಜಾ ಬೆಳೆಯುವ ಬಗ್ಗೆ ಮಾಹಿತಿ ಇದ್ದು, ತನಿಖೆ ನಡೆಸಲಾಗುತ್ತಿದೆ. ಡ್ರಗ್ಸ್‌ ದಂಧೆಗೆ ಸಂಬಂಧಿಸಿದಂತೆ ಕೇರಳ ಮತ್ತು ಮೈಸೂರಿನ ವ್ಯಕ್ತಿಗಳಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಸುಳಿವು ಸಿಕ್ಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಲೆನಾಡು ಭಾಗದಲ್ಲಿ ಹೋಂ ಸ್ಟೇ, ರೆಸಾರ್ಟ್‌ ಮಾಲೀಕರ ಸಭೆ ಕರೆದು ಮದ್ಯ ಪೂರೈಸದಂತೆ ಎಚ್ಚರಿಕೆ ನೀಡಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಪಾರ್ಟಿ ನಡೆದಿದ್ದರೇ, ಅದರ ಬಗ್ಗೆಯೂ ಮಾಹಿತಿ ಕೇಳಲಾಗಿದೆ. ಶನಿವಾರ, ಭಾನುವಾರ ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ತೆರೆದು, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದರು.

ಸುರೇಶ್‌ ಸೇರಿ 13 ಮಂದಿ ವಿರುದ್ಧ ಎಫ್‌ಐಆರ್‌

ಬೇಲೂರು ತಾಲ್ಲೂಕಿನ ಅರೇಹಳ್ಳಿ ಪೊಲೀಸ್‌ ಠಾಣೆ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಸೇರಿದಂತೆ 18 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ರೌಡಿ ಶೀಟರ್‌ಗಳಾದ ಮಧು ಮತ್ತು ಭರತ್ ಪತ್ತೆಗೆ ಎರಡು ತಂಡ ರಚಿಸಲಾಗಿದೆ ಎಂದು ಹೇಳಿದರು.

ಠಾಣೆ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಅವರು ರೌಡಿಗಳ ಪರೇಡ್‌ ನಡೆಸಿದ ವೇಳೆ ಮಧು, ಭರತ್‌ ಹಾಜರಾಗಿರಲಿಲ್ಲ. ಮಧು ವಿರುದ್ಧ ಅಕ್ರಮ ಮರಳು ಸಾಗಣೆ, ದರೋಡೆ ಪ್ರಕರಣ ಇದೆ. ತಮ್ಮ ಬೆಂಬಲಿಗರ ಜತೆ ಸುರೇಶ್‌ ಠಾಣೆಗೆ ಬಂದು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಯಾವುದೇ ಸಮಸ್ಯೆ ಇದ್ದರೆ ನನ್ನ ಬಳಿ ಚರ್ಚೆ ನಡೆಸಬೇಕಿತ್ತು. ಪೊಲೀಸರಿಗೆ ಹೀಗಾದರೆ ಜನ ಸಾಮಾನ್ಯರ ಗತಿ ಏನು? ಕಾನೂನು ಎಲ್ಲರಿಗೂ ಒಂದೇ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸ್ಪಷ್ಪಪಡಿಸಿದ ಎಸ್ಪಿ, ರೌಡಿಶೀಟರ್‌ಗಳು ಹೊರತು ಪಡಿಸಿ ಉಳಿದವರಿಗೆ ಗುರುವಾರ ಜಾಮೀನು ದೊರೆತಿದೆ ಎಂದು ಮಾಹಿತಿ
ನೀಡಿದರು.

ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಎಸ್‌ಐಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT