ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಜಿಪಿಎಸ್ ದುರ್ಬಳಕೆ ಮಾಡಿಕೊಂಡವರನ್ನ ಕಪ್ಪು ಪಟ್ಟಿಗೆ ಸೇರಿಸಿ: ಡಿ.ಸಿ ಸೂಚನೆ

ಹಾಸನ: ಮರಳು ಅಕ್ರಮ ತಡೆಗೆ 17 ಚೆಕ್‌ಪೋಸ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಅಕ್ರಮ ಮರಳು ಸಾಗಾಣಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಯಂತ್ರಿಸಲು ಚೆಕ್ ಪೋಸ್ಟ್‌ ಬಲಗೊಳಿಸುವುದರ ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವಿಶೇಷ ನಿಗಾವಹಿಸಲು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ ಹಾಗೂ ಜಿಲ್ಲಾ ಕ್ರಷರ್ ಲೈಸೆನ್ಸಿಂಗ್ ಮತ್ತು ನಿಯಂತ್ರಣಾ ಪ್ರಾಧಿಕಾರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಖನಿಜ ಸಂಪನ್ಮೂಲಗಳ ಅಕ್ರಮ ಸಾಗಾಟ ಮತ್ತು ಬಳಕೆ ಸಂಪೂರ್ಣ ನಿಯಂತ್ರಣಗೊಳ್ಳಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಈವರೆಗೆ ಪರವಾನಗಿ ಪಡೆದಿರುವ ಮರಳು ನಿಕ್ಷೇಪಗಳಲ್ಲಿ ಆಗಿರುವ ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದೇ ಪರವಾನಗಿ ಬಳಸಿ ಹಲವು ಟ್ರಿಪ್‍ಗಳ ಸಾಗಾಟ, ಜಿಪಿಎಸ್ ದುರ್ಬಳಕೆ ಪ್ರಕರಣ ಪಟ್ಟಿ ಮಾಡಬೇಕು. ಉದ್ದೇಶಪೂರ್ವಕವಾಗಿ ತಪ್ಪು ಎಸಗಿರುವವರ ವಾಹನಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಸಾರಿಗೆ ಇಲಾಖೆಗೆ ವರದಿ ನೀಡಿ ಅಲ್ಲಿಯೂ ನಿಯಮಾನುಸಾರ ಪ್ರಕರಣ ದಾಖಲಿಸಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಎಲ್ಲಾ ಮರಳು ನಿಕ್ಷೇಪ ಮಾಲೀಕರು ನಿಯಮ ಪಾಲನೆ ಮಾಡಬೇಕು. ಅಕ್ರಮಕ್ಕೆ ಪ್ರೋತ್ಸಾಹ ನೀಡಿದರೆ ಅವರ ಪರವಾನಗಿ ರದ್ದು ಪಡಿಸಬೇಕಾಗುತ್ತದೆ. ಅದೇ ರೀತಿ ಮರಳು ಸಾಗಾಟ ಪರ್ಮಿಟ್ ವಿತರಣೆ ವೇಳೆ ತಪ್ಪುಗಳಾಗದಂತೆ ಎಚ್ಚರವಹಿಸಿ ಎಂದು ತಿಳಿಸಿದರು.

ಅನಧಿಕೃತ ಮರಳು ಗಣಿಗಾರಿಕೆ, ಸಂಗ್ರಹಣೆ, ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ 17 ಚೆಕ್‍ಪೋಸ್ಟ್‌ಗಳು ಹಾಗೂ ಚಾಲಿತ ದಳದ ಪ್ರತ್ಯೇಕ ತಂಡಗಳನ್ನಾಗಿ ಮಾಡಿಕೊಂಡು ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಸ್ಕ್ವಾಡ್‍ಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಬೇಲೂರು, ಸಕಲೇಶಪುರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ತಡೆಗಟ್ಟಲು ಸಿಬ್ಬಂದಿಗೆ ಓಡಾಡಲು ವಾಹನ, ಚೆಕ್‍ಪೋಸ್ಟ್‌ಗಳಿಗೆ ಸಿಸಿಟಿವಿ ಕ್ಯಾಮೆರಾ, ಟೇಬಲ್, ಕುರ್ಚಿ ಮತ್ತಿತರ ಸಾಮಾಗ್ರಿ ನೀಡಬೇಕು ಎಂದು ಸೂಚನೆ ನೀಡಿದರು.

ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಚೆಕ್‍ಪೋಸ್ಟ್ ಸೇವೆಗೆ ಒದಗಿಸಲಾಗುವುದು ಎಂದು ಡಿಸಿ ತಿಳಿಸಿದರು.

ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಎಲ್ಲಾ ಸರ್ಕಾರಿ ಕಾಮಗಾರಿಗಳಿಗೆ ಉಪಯೋಗಿಸುತ್ತಿರುವ ಉಪಖನಿಜಗಳಾದ ಕಟ್ಟಡ ಕಲ್ಲು, ಜಲ್ಲಿ, ಎಂ.ಸ್ಯಾಂಡ್, ಮಣ್ಣು, ಮುರ್ರಂ ಇತರೆ ಉಪಖನಿಜಗಳನ್ನು ಕಲ್ಲುಗಣಿ ಗುತ್ತಿಗೆ, ಕ್ರಷರ್ ಘಟಕದಾರರಿಂದ ಪರವಾನಗಿ ಪಡೆದು ಸಾಗಾಣಿಕೆ ಮಾಡಿಕೊಳ್ಳಲು ಷರತ್ತು ವಿಧಿಸುವುದು. ತಪ್ಪಿದ್ದಲ್ಲಿ ಆರ್ಥಿಕ ನಷ್ಟ ಅಂದರೆ ಡಿ.ಎಂ.ಎಫ್, ಟಿ.ಸಿ.ಎಸ್ ಇತರೆ ಶುಲ್ಕಗಳಿಗೆ ಕಾಮಗಾರಿ ಗುತ್ತಿಗೆ ನೀಡಿರುವ ಇಲಾಖೆ ಮುಖ್ಯಸ್ಥರೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಪ್ರಿಯಾಂಕ ಎಚ್ಚರಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಮಾತನಾಡಿ,  ನಿಯಮಾನುಸಾರ ಜಿಪಿಎಸ್ ಅಳವಡಿಸದಿರುವ ವಾಹನಗಳಿಗೆ ಪರವಾನಗಿ ನೀಡಿರುವ ಹಾಗೂ ಜಿಪಿಎಸ್ ಸಾಧನದ ಸಂಪರ್ಕ ಕಡಿತಗೊಳಿಸಿರುವ ಬಗ್ಗೆ ಮತ್ತು ಮರಳು ಪರವಾನಗಿ ಪಡೆಯದೇ ಮರಳು ದಾಸ್ತಾನು ಪ್ರದೇಶದಲ್ಲಿ ಸಂಚರಿಸುವವರ ವಿರುದ್ಧ  ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಅವರು ಮರಳು ನಿಕ್ಷೇಪ ಹಾಗೂ ಕ್ರಷರ್ ಲೈಸೆನ್ಸಿಂಗ್‌ ಬಗ್ಗೆ ವಿವರ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಪ್ರಿಯಾಂಗ, ಉಪವಿಭಾಗಾಧಿಕಾರಿಗಳಾದ ಎಚ್.ಎಲ್.ನಾಗರಾಜು, ಕವಿತಾ ರಾಜರಾಂ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪರಪ್ಪಸ್ವಾಮಿ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು