ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿದ ಹೇಮೆಗೆ ಪ್ರಜ್ವಲ್ ಬಾಗಿನ

ನಿರೀಕ್ಷೆಗಿಂತಲೂ ಹೆಚ್ಚಿನ ಮಳೆ, ಹೆಚ್ಚುತ್ತಿರುವ ಸಂತ್ರಸ್ತರ ಸಂಖ್ಯೆ
Last Updated 11 ಆಗಸ್ಟ್ 2019, 12:31 IST
ಅಕ್ಷರ ಗಾತ್ರ

ಹಾಸನ: ಭರ್ತಿಯಾದ ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ಬಾಗಿನ ಸಮರ್ಪಿಸಿದರು.

ಜಲಾಶಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಪ್ರಜ್ವಲ್‌, ನಿರೀಕ್ಷೆಗಿಂತಲೂ ಹೆಚ್ಚಿನ ಮಳೆಯಾಗಿದ್ದು, ಒಂದು ಲಕ್ಷ ಕ್ಯುಸೆಕ್‌ ನೀರಿನ ಒಳಹರಿವು ಇದೆ. ಹಾಗಾಗಿ ಜಲಾಶಯಕ್ಕೆ ಮತ್ತು ಜನರಿಗೆ ತೊಂದರೆ ಆಗದಂತೆ ಹೆಚ್ಚುವರಿ ನೀರನ್ನು ಹೊರಗೆ ಬಿಡಲು ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿ ತಿರ್ಮಾನಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಪ್ರವಾಹದಿಂದ ಹೊಳೆನರಸೀಪುರ ತಾಲ್ಲೂಕಿನಲ್ಲಿ 25 ಸಾವಿರ ಎಕರೆ, ಬೇಲೂರು ತಾಲ್ಲೂಕಿನಲ್ಲಿ 50 ಸಾವಿರ ಎಕರೆ ಭೂಮಿ ಹಾಳಾಗಿದೆ. ಜಿಲ್ಲೆಯಲ್ಲಿ 18 ಕಾಲುವೆಗಳು ಒಡೆದಿವೆ. ಹಳೆಕೋಟೆ ಹೋಬಳಿಯಲ್ಲಿ 98 ಮನೆಗಳು, ಚನ್ನರಾಯಪಟ್ಟಣದಲ್ಲಿ 28 ಮನೆಗಳು, ಹೊಳೆನರಸೀಪುರದಲ್ಲಿ 5 ಮತ್ತು ಗನ್ನಿಕಡದಲ್ಲಿ ಹಲವು ಮನೆಗಳು ಕುಸಿದಿವೆ. ಚನ್ನರಾಯಪಟ್ಟಣದ 78 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ವಿವರಿಸಿದರು.

ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಅನುಗುಣವಾಗಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಹೊಳೆನರಸಿಪುರದಲ್ಲಿ 1, ಸಕಲೇಶಪುರದಲ್ಲಿ 6, ಬೇಲೂರಿನಲ್ಲಿ 4 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಜಾನುವಾರುಗಳಿಗಾಗಿ ಗೋಶಾಲೆಗಳನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು.

ಚೆಸ್ಕಾಂ ಅಧಿಕಾರಿಗಳಿಗೆ ಜಲಾವೃತ ಸ್ಥಳಗಳಲ್ಲಿ ವಿದ್ಯುತ್ ಕಡಿತ ಮಾಡಲು ಹೇಳಲಾಗಿದೆ. ಚನ್ನರಾಯಪಟ್ಟಣದಲ್ಲಿ ವಿದ್ಯುತ್ ಸ್ಪರ್ಶದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಹಾಗಾಗಿ ಜನರು ವಿದ್ಯುತ್ ಅಪಾಯದ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು.

ಸಂತ್ರಸ್ತರ ತಾತ್ಕಾಲಿಕ ಪರಿಹಾರಕ್ಕಾಗಿ ₹ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನೂ ₹ 10 ಕೋಟಿ ಅಗತ್ಯವಿದ್ದು, ಅದನ್ನು ಸರ್ಕಾರ ಕೂಡಲೇ ನೀಡಬೇಕೆಂದು ಮನವಿ ಮಾಡಿದರು.

ಪೊಲೀಸ್ ವರಿಷ್ಠಾಧಿಕಾರಿ ಎ.ಎಸ್.ಪ್ರಕಾಶ್‍ಗೌಡ, ಮುಖಂಡರಾದ ಪಟೇಲ್ ಶಿವರಾಂ, ರಾಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT