ಶನಿವಾರ, ಮೇ 15, 2021
24 °C
ಹಾನುಬಾಳನಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್‌ ಪಂದ್ಯಾವಳಿ

ಹಾನುಬಾಳ್ ಕಪ್‌ ಗೆದ್ದ ಮೀಡಿಯಾ ಕಿಂಗ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ತಾಲ್ಲೂಕಿನ ಹಾನುಬಾಳು ಗ್ರಾಮದಲ್ಲಿ ಎರಡು ದಿನ ನಡೆದ ಹೊನಲು ಬೆಳಕಿನ ‘ಹಾನುಬಾಳ್ ಕಪ್‌’ ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಪಂದ್ಯಾವಳಿಯಲ್ಲಿ ರಾಜ್ಯದ ಮೀಡಿಯಾ ಕಿಂಗ್ಸ್‌ ತಂಡ ಜಯಗಳಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

ಸ್ಥಳೀಯ ಜಿಂಜರ್‌ ಅಸೋಸಿಯೇಷನ್‌ ಪ್ರಾಯೋಜಕತ್ವದ (ಎಂಎನ್‌ಸಿ) ನಡೆದ ಪಂದ್ಯಾವಳಿಯಲ್ಲಿ ಕೇರಳದ ಬಿಪಿಸಿಎಲ್‌ ತಂಡ ಎರಡನೇ ಸ್ಥಾನ ಗಳಿಸಿತು.

ನಾಲ್ಕು ಸೆಟ್‌ಗಳಲ್ಲಿ ಎರಡೂ ತಂಡಗಳು ತಲಾ ಎರಡು ಅಂಕಗಳನ್ನು ಪಡೆಯುವ ಮೂಲಕ ಸಮಬಲ ಪ್ರದರ್ಶಿಸಿದವು. 5ನೇ ಸೆಟ್‌ನಲ್ಲಿ ಮೀಡಿಯಾ ಕಿಂಗ್ಸ್ 15, ಎಂಎನ್‌ಸಿ 13 ಅಂಕಗಳನ್ನು ಗಳಿಸಿತು. ಮೂಲಕ ಕಪ್‌ ಮೀಡಿಯಾ ಕಿಂಗ್ಸ್‌ ಪಾಲಾಯಿತು. ಮೂರನೇ ಸ್ಥಾನವನ್ನು ಹೋಂ ಸ್ಟೇ ಮಾಲೀಕರ ಸಂಘದ ಪ್ರಾಯೋಜಕತ್ವದ ಅನೂಪ್‌ ಡಿಕೋಸ್ಟಾ ತಂಡ, ಎಸ್‌ಪಿ ಹಾಸನ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.

ಇದೇ ಮೊದಲ ಬಾರಿಗೆ ಹಾನುಬಾಳು ಫ್ರೆಂಡ್ಸ್‌ ವತಿಯಿಂದ ವ್ಯವಸ್ಥಿತವಾಗಿ ನಡೆದ ಪಂದ್ಯಾವಳಿಯಲ್ಲಿ ಭಾರತದ ವಾಲಿಬಾಲ್‌ ತಂಡ ಪ್ರತಿನಿಧಿಸುವ ಅನೂಪ್‌ ಡಿಕೋಸ್ಟಾ, ಉಕ್ರಪಾಂಡ್ಯನ್‌, ಮನೋಜ್‌, ನವೀನ್‌ರಾಜ್‌, ಅಜಿತ್‌ಲಾಲ್ ಚಂದ್ರನ್‌, ರೈಸನ್‌ ರೆಬೆಲ್ಲೋ, ಮುತ್ತು, ಗುಬ್ಬಿ ರವಿ, ಅಶ್ವ‌ಲ್‌ ರೈ, ಕಾರ್ತಿಕ್‌ ಅಶೋಕ್, ರೀತೇಶ್‌, ವಿನಿತ್‌ಕುಮಾರ್, ಕಮಲೇಶ್‌ ಕಟಿಕ್‌, ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿ ಹೊಳೆನರಸೀಪುರದ ತರುಣ್‌ಗೌಡ, ಸೇರಿದಂತೆ ಇನ್ನೂ ಹಲವು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಆಟಗಾರರು ಎರಡು ದಿನಗಳ ಕಾಲ ಪ್ರೇಕ್ಷಕರಿಗೆ ರೋಚಕ ಪ್ರದರ್ಶನ ನೀಡಿದರು.

ಪಂದ್ಯಾವಳಿಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ‘ ಕ್ರೀಡೆಯಿಂದ ಪರಸ್ಪರ ಬಾಂಧವ್ಯ ಹೆಚ್ಚಾಗುತ್ತದೆ. ಹೋಬಳಿ ಕೇಂದ್ರದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್‌ ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಭಾಗದ ಯುವಕರಿಗೆ ಇದು ಸ್ಫೂರ್ತಿ ಆಗಲಿದೆ’ ಎಂದರು.

ಅರ್ಜುನ್ ಪ್ರಶಸ್ತಿ ಪುರಸ್ಕೃತ ಥೋಮ್‌ ಜೋಸೆಫ್‌ ಹಾಗೂ ಹಾಸನ ಜಿಲ್ಲೆಯ 65 ಮಂದಿ ವಾಲಿಬಾಲ್‌ ಮಾಜಿ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಹಾನುಬಾಳು ಫ್ರೆಂಡ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ನಾರಾಯಣಗೌಡ, ಉದ್ಯಮಿ ಉದಯ್‌ಗೌಡ, ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್‌, ಹುರುಡಿ ಅರುಣ್‌ಕುಮಾರ್‌, ಹುರುಡಿ ಪ್ರಶಾಂತ್‌, ಗ್ರಾಮಾಂತರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಚಂದ್ರಶೇಖರ್‌, ಜಿ.ಪಂ. ಸದಸ್ಯ ಸುಪ್ರದೀಪ್ತ ಯಜಮಾನ್‌, ಎಚ್‌.ಎ. ಭಾಸ್ಕರ್, ಜಿ.ಪಂ. ಮಾಜಿ ಸದಸ್ಯ ಸಣ್ಣಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸಿಮೆಂಟ್‌ ಮಂಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಳಾ ಕೇ‌ಶವಮೂರ್ತಿ, ಹಾನಬಾಳು ಸಂದೀಪ್, ಪಿಡಿಒ ಹರೀಶ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು