ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್‌ ಪ್ರಕರಣ | ಅಂಗೈ ಹುಣ್ಣಿಗೆ ಕನ್ನಡಿ ಬೇಕೆ: ಶಿವಲಿಂಗೇಗೌಡ

ಎಚ್‌.ಡಿ.ಕುಮಾರಸ್ವಾಮಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ತಿರುಗೇಟು
Published 9 ಮೇ 2024, 13:04 IST
Last Updated 9 ಮೇ 2024, 13:04 IST
ಅಕ್ಷರ ಗಾತ್ರ

ಹಾಸನ: ನಮ್ಮ ಜಿಲ್ಲೆಯಲ್ಲಿ ಲೈಂಗಿಕ ಹಗರಣ ಆಯಿತಯಲ್ಲ ಎಂದು ಮನಸ್ಸಿಗೆ ಬಹಳ ವೇದನೆಯಾಗಿದೆ. ಇಂತಹ ಕೃತ್ಯ ನಡೆಯಬಾರದಿತ್ತು. ಪಕ್ಷ ಭೇದ ಮರೆತು ಎಲ್ಲರೂ ಖಂಡಿಸಬೇಕಿತ್ತು. ಅದರಲ್ಲೂ ಲೈಂಗಿಕ ದೌರ್ಜನ್ಯದ ವಿಡಿಯೊಗಳನ್ನು ಅವರೇ ಚಿತ್ರೀಕರಿಸಿಕೊಂಡು ಪ್ರಪಂಚಕ್ಕೆ ಗೊತ್ತಾಗುವಂತೆ ಮಾಡಿದ್ದಾರೆ. ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಂದು ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಗೋಡೆ ಮಧ್ಯೆ ಕೆಲವು ಘಟನೆಗಳು ನಡೆದು ಹೋಗುತ್ತವೆ. ಆ ಘಟನೆ ಹೊರಗೆ ಬರಲು ಕಾರಣ ಏನು? ಅದನ್ನು ಸೆರೆ ಹಿಡಿಯದಿದ್ದರೆ ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ ಎಂದರು.

ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಹಾಸನ ಎನ್‌.ಆರ್‌. ವೃತ್ತದಲ್ಲಿ ಪರದೆ ಹಾಕಿ ಎಲ್ಲರಿಗೂ ತೋರಿಸುತ್ತೇನೆ ಎಂದು ಶಾಸಕ ಎಚ್‌.ಡಿ. ರೇವಣ್ಣ ಅವರಿಗೆ ಏಕವಚನದಲ್ಲೇ ಸವಾಲು ಹಾಕಿದ್ದರು. ನಂತರ ಪೆನ್ ಡ್ರೈವ್ ಬಹಿರಂಗವಾಗಿದ್ದು, ಈ ರೀತಿ ಮಾಡಿದವರು ಯಾರು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ಹೇಳಿದರು.

ದೇವರಾಜೇಗೌಡ ಅವರು ಪೆನ್ ಡ್ರೈವ್ ಹಂಚಿದ್ದರೆ ಬೆಳಕಿಗೆ ಬರಲೇಬೇಕು. ಸಂಸದರ ಪ್ರಜ್ವಲ್ ರೇವಣ್ಣ ಅವರ ಅನರ್ಹತೆ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪೆನ್ ಡ್ರೈವ್ ಹಾಜರುಪಡಿಸಿದ್ದರೆ, ಪ್ರಕರಣಕ್ಕೆ ಪೂರಕ ಸಾಕ್ಷಿ ದೊರೆತಂತಾಗಿ ಹೋರಾಟಕ್ಕೆ ಜಯ ಸಿಗುತ್ತಿತ್ತು. ಇದನ್ನು ಬಿಟ್ಟು ಪೆನ್ ಡ್ರೈವ್ ಬಹಿರಂಗ ಆಗುವಂತೆ ಮಾಡಿ ನೂರಾರು ಮಹಿಳೆಯರ ಮಾನ ಹರಾಜು ಆಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜ್ವಲ್ ರೇವಣ್ಣ ಅವರು ಇಲ್ಲೇ ಇದ್ದುಕೊಂಡು ಪ್ರಕರಣವನ್ನು ಎದುರಿಸಬೇಕಿತ್ತು. ಆದರೆ ಹೊರದೇಶಕ್ಕೆ ಹೋದರು ಎಂದ ಶಿವಲಿಂಗೇಗೌಡ, ಎಸ್ಐಟಿ ಸರಿ ಇಲ್ಲ ಎಂದು ದೇವರಾಜೇಗೌಡ ಹೇಳುತ್ತಾರೆ. ಪೆನ್ ಡ್ರೈವ್ ಹರಿಬಿಡಲು ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ಏಕಾಏಕಿ ಪ್ರತಿಭಟನೆ ಮಾಡಲಾಗುತ್ತಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದವರು. ಮಾತಿನಲ್ಲಿ ಹಿಡಿತವನ್ನು ತಪ್ಪುತ್ತಿದ್ದಾರೆ, ಎಲ್ಲರನ್ನೂ ಏಕವಚನದಲ್ಲಿ ಬೈಯ್ಯುತ್ತಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸಿದರು.

ಪೆನ್ ಡ್ರೈವ್ ಹರಿ ಬಿಟ್ಟವರು ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ. ಇದರಲ್ಲಿ ರಾಜಕಾರಣ ನಡೆಯುತ್ತಿದ್ದು, ಈಗ ಜಾತಿಯನ್ನು ಎಳೆದು ತರಲಾಗುತ್ತಿದೆ ಎಂದು ಆರೋಪಿಸಿದ ಅವರು, ವಕೀಲರು, ವಕೀಲರ ವೃತ್ತಿ ಮಾಡಿಕೊಂಡು ಇರಬೇಕು. ಸಾವಿರಾರು ಪೆನ್ ಡ್ರೈವ್ ಹಂಚಿಕೆ ಆಗಬಾರದು. ಮುಂದಿನ ದಿನಗಳಲ್ಲಿ ತನ್ನನ್ನು ಎ1 ಆರೋಪಿಯಾಗಿ ಮಾಡುತ್ತಾರೆ ಎಂದು ದೇವರಾಜೇಗೌಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯ ಡಿ.ಕೆ. ಶಿವಕುಮಾರ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುವುದು ಖಂಡನೀಯ. ನಿಮ್ಮ ಪಕ್ಷದ ಮೇಲೆ ಬಂದಿರುವ ಆರೋಪವನ್ನು ಬೇರೆ ಪಕ್ಷದ ಮೇಲೆ ಹೊರಿಸುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇವರ ಮಾನ ಮರ್ಯಾದೆ ಹರಾಜಾಗಿ ಹೋಗಿದೆ. ಇಂತಹ ಪಕ್ಷ ಈ ರಾಜ್ಯಕ್ಕೆ ಬೇಡ ಎನ್ನುವ ಮನಸ್ಥಿತಿಯಲ್ಲಿ ಜನ ಇದ್ದಾರೆ. ಇದನ್ನು ತಪ್ಪಿಸಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.

ರೇವಣ್ಣ ಬಂಧನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಂತ್ರಸ್ತೆಯ ಅಪಹರಣದ ನಂತರ ಆಕೆಯ ಮಗ ದೂರು ನೀಡಿದ ಹಿನ್ನೆಲೆಯಲ್ಲಿ ಎಸ್ಐಟಿ ರೇವಣ್ಣ ಅವರಿಗೆ ಮೂರು ಬಾರಿ ನೋಟಿಸ್ ಕೊಟ್ಟಿತ್ತು. ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ ಬಂಧನ ಮಾಡಲಾಗಿದೆ. ಇದರಲ್ಲಿ ರಾಜಕೀಯ ಇಲ್ಲ ಎಂದರು.

ಮಾನವೀಯತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂತ್ರಸ್ತರಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಿದೆ. ಸಂತ್ರಸ್ತೆಯರ ಗೌಪ್ಯತೆ ಕಾಪಾಡಿಕೊಂಡು ಅವರ ಜೀವನಕ್ಕೆ ಆಧಾರ ಸ್ತಂಭವಾಗಿ ನಿಲ್ಲಲಿದ್ದೇವೆ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮುಖಂಡರಾದ ಎಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಶ್ರೀಧರ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT