ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗು ಬೆಳೆ ವಿಚಾರ ಸಂಕಿರಣ: ತೆಂಗಿನ ಎಣ್ಣೆ ಬಳಕೆಯಿಂದ ಉತ್ತಮ ಆರೋಗ್ಯ

ತೆಂಗು ಬೆಳೆ ವಿಚಾರ ಸಂಕಿರಣದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ
Published 30 ಸೆಪ್ಟೆಂಬರ್ 2023, 12:50 IST
Last Updated 30 ಸೆಪ್ಟೆಂಬರ್ 2023, 12:50 IST
ಅಕ್ಷರ ಗಾತ್ರ

ಅರಸೀಕೆರೆ: ಪಾಮ್‌ ಆಯಿಲ್ ಅಡುಗೆಯಲ್ಲಿ ಹೆಚ್ಚು ಬಳಸುವ ಬದಲು, ಶುದ್ದ, ಆರೋಗ್ಯಕರ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಮನುಷ್ಯನ ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ಉತ್ತಮ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಕುರುವಂಕ ಗ್ರಾಮದಲ್ಲಿ ಶನಿವಾರ ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ತೆಂಗು ಬೆಳೆ ವಿಚಾರ ಸಂಕಿರಣ (ಸಮಗ್ರ ಬೇಸಾಯ ಕ್ರಮಗಳು ಹಾಗೂ ಕೀಟ ರೋಗ ನಿವಾರಣೆ) ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೆಂಗು ಬೆಳೆಯು ನಮ್ಮ ತಾಲ್ಲೂಕಿನ ಪ್ರಮುಖ ವಾಣಿಜ್ಯ ಹಾಗೂ ಅತ್ಯಗತ್ಯವಾದ ಬೆಳೆ. ಇತ್ತೀಚೆಗೆ ಅಡುಗೆಯಲ್ಲಿ ಶುದ್ದವಾದ ಕೊಬ್ಬರಿ ಎಣ್ಣೆಯನ್ನು ಬಳಸುವುದು ಕಡಿಮೆಯಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಪಾಮ್‌ ಆಯಿಲ್ ಬಳಸುವುದನ್ನು ಕಡಿಮೆ ಮಾಡಬೇಕು. ಕೊಬ್ಬರಿ ಒಳಗೊಂಡಂತೆ ಸ್ವದೇಶಿ ವಸ್ತುಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.

ತೆಂಗು ಆಧಾರಿತ ಕಚ್ಚಾ ವಸ್ತುಗಳು ಮನುಷ್ಯನ ಸಾಮಾನ್ಯ ಜೀವನಕ್ಕೆ ಅಗತ್ಯವಾಗಿದೆ. ಆದರೆ ತೆಂಗು ಆಧಾರಿತ ಕೈಗಾರಿಕೆಗಳು ನೆಲಕಚ್ಚಿರುವುದು ವಿಪರ್ಯಾಸ. ತೆಂಗು ಬೆಳೆ ಪುನಶ್ಚೇತನ ಮತ್ತು ಉಳಿವಿಗೆ ಎಲ್ಲರ ಶ್ರಮ ಅವಶ್ಯಕ ಎಂದರು.

ತೆಂಗು ಬೆಳೆಗೆ ಹಿಂದೆ ಯಾವುದೇ ರೋಗ ಬಾಧೆ ಕಾಡುತ್ತಿರಲಿಲ್ಲ. ಆಧುನಿಕ ಯುಗದಲ್ಲಿ ವೈಜ್ಞಾನಿಕತೆ ಬೆಳೆದಂತೆ ರೋಗ ಬಾಧೆಗಳು. ಹೆಚ್ಚಾಗಿ ಕಾಡುತ್ತಿವೆ. ಈ ನಿಟ್ಟಿನಲ್ಲಿ ತೆಂಗಿನ ಮರಕ್ಕೆ ಅತಿಯಾದ ಚಿಕಿತ್ಯೆಯೂ ಒಳ್ಳೆಯದಲ್ಲ. ಸಾವಯವ ಗೊಬ್ಬರ ಬಳಸಿಕೊಂಡು ತೆಂಗು ಬೆಳೆ ಸೇರಿದಂತೆ ಎಲ್ಲ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ ಮಾತನಾಡಿ, ತೆಂಗು ರೈತರ ಜೀವನಾಡಿ. ಅಷ್ಟೇ ಅಲ್ಲದೆ ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ರೈತರಿಗೆ ತೆಂಗು ಬೆಳೆ ವಿಚಾರ ಸಂಕಿರಣ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದರು.

ಕುರುವಂಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ನವೀನ್, ಉಪಾಧ್ಯಕ್ಷೆ ಲತಾ ಸಿದ್ದೇಶ್, ತೋಟಗಾರಿಕೆ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ಡಾ. ನಾಗರಾಜ್, ಹಾಸನ ಜಿಲ್ಲಾ ಉಪ ನಿರ್ದೇಶಕಿ ಮಂಗಳಾ, ತಾಲ್ಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಕುಮಾರ್, ಸಹಾಯಕ ನಿರ್ದೇಶಕ ಶಿವಕುಮಾರ್, ತೋಟಗಾರಿಕೆ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸದಸ್ಯರಾದ ಎಂ.ಟಿ. ವೆಂಕಟೇಶ್, ಅಶೋಕ್, ಅಶೋಕ ಕುಮಾರ, ಮುಖಂಡ ಅಜ್ಜಪ್ಪ, ಗ್ರಾಮದ ಹಲವರು ಉಪಸ್ಥಿತರಿದ್ದರು.

ರಾಜ್ಯದ ಕೊಬ್ಬರಿಯನ್ನು ಅನ್ಯ ರಾಜ್ಯಗಳು ಮತ್ತು ದೇಶಗಳಿಗೆ ರಫ್ತು ಮಾಡುವುದನ್ನು ಕಡಿಮೆ ಮಾಡಿ ರಾಜ್ಯದೊಳಗೇ ಬಳಕೆ ಆಗುವಂತೆ ಕ್ರಮ ಕೈಗೊಳ್ಳಬೇಕು.

-ಕೆ.ಎಂ. ಶಿವಲಿಂಗೇಗೌಡ

‘ಎತ್ತರ ತೆಂಗು ನಾಟಿ ಮಾಡಿ’

ತೆಂಗಿನ ಸಸಿಗಳಲ್ಲಿ ಎತ್ತರ ಗಿಡ್ಡ ಹಾಗೂ ಹೈಬ್ರಿಡ್ ಎಂಬ ಮೂರು ರೀತಿಯ ತಳಿಗಳು ಇರುತ್ತವೆ. ಹಾಸನ ತುಮಕೂರು ಜಿಲ್ಲೆಗಳಲ್ಲಿ ಎತ್ತರದ ತಳಿಗಳ ತೆಂಗು ಹೆಚ್ಚು ಕಂಡುಬರುತ್ತದೆ. ಎತ್ತರದ ತೆಂಗು ತಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ. ಆದರೆ ಗಿಡ್ಡ ತಳಿಗಳಿಗೆ ಹೆಚ್ಚು ನೀರಿನ ಅಗತ್ಯತೆ ಇರುತ್ತದೆ ಎಂದು ತೋಟಗಾರಿಕಾ ವಿಜ್ಞಾನಿ ಡಾ. ನಾಗಪ್ಪ ದೇಸಾಯಿ ತಿಳಿಸಿದರು. ಅರಸೀಕೆರೆ ತಿಪಟೂರು ಭಾಗದಲ್ಲಿ ಬೆಳೆಯುವ ಎತ್ತರದ ತೆಂಗು ತಳಿಗಳ ತೆಂಗಿನಕಾಯಿ ಹೊರ ರಾಜ್ಯಗಳಿಗೆ ಮತ್ತು ವಿದೇಶಗಳಿಗೆ ಹೆಚ್ಚು ರಫ್ತಾಗುತ್ತದೆ. ಎತ್ತರದ ತಳಿಗಳು 6 ರಿಂದ 7 ನೇ ವರ್ಷಕ್ಕೆ ಇಳುವರಿ ಕೊಡಲು ಆರಂಭಿಸುತ್ತವೆ ರೈತರು ಎತ್ತರದ ತೆಂಗು ತಳಿಗಳನ್ನು ಹೆಚ್ಚು ನಾಟಿ ಮಾಡಿದರೆ ಇಳುವರಿ ಪಡೆದು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT