ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರಧಾನಿಯಾದರೆ ಪ್ರಜಾತಂತ್ರ ಉಳಿಯಲ್ಲ: ಸಿದ್ದರಾಮಯ್ಯ

ಮೈತ್ರಿ ಅಭ್ಯರ್ಥಿ ಪರ ಗುರು–ಶಿಷ್ಯರ ಪ್ರಚಾರ
Last Updated 11 ಏಪ್ರಿಲ್ 2019, 14:00 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಗುರು, ಶಿಷ್ಯರಾದ ಸಂಸದ ಎಚ್.ಡಿ.ದೇವೇಗೌಡ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮೈತ್ರಿ ಕೂಟದ ಅಭ್ಯರ್ಥಿ ಪರ ಜಂಟಿ ಚುನಾವಣಾ ಪ್ರಚಾರ ಮಾಡಿದರು.

ಒಂದೇ ಹೆಲಿಕಾಪ್ಟರ್ ನಲ್ಲಿ ಓಡಾಡುವುದರ ಜೊತೆಗೆ ಒಂದೇ ವೇದಿಕೆ ಹಂಚಿಕೊಂಡು, ಒಬ್ಬರೇ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದನ್ನು ಕಂಡ ಜನರು ಶಿಳ್ಳೆ ಹೊಡೆದು ಸಂಭ್ರಮಿಸಿದರು.

ಅರಸೀಕೆರೆ ತಾಲ್ಲೂಕು ಬಾಣಾವರದಿಂದ ಪ್ರಚಾರ ಆರಂಭಿಸಿದ ಉಭಯ ನಾಯಕರು, ಗಂಡಸಿ, ಅರಕಲಗೂಡು ಮತ್ತು ಹಳ್ಳಿ ಮೈಸೂರಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು, ಪ್ರಜ್ವಲ್ ರೇವಣ್ಣ ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ನಾಯಕರು, ‘ ಮೋದಿ ಒಬ್ಬ ಸರ್ವಾಧಿಕಾರಿ, ಮಹಾನ್ ಸುಳ್ಳುಗಾರ, ಏಕ ಚಕ್ರಾಧಿಪತ್ಯ ನಡೆಸಲು ಹೊರಟಿದ್ದಾರೆ. ಇಂಥವರು ಮತ್ತೆ ಪ್ರಧಾನಿಯಾದರೆ ದೇಶ ಉಳಿಯಲ್ಲ. ಪ್ರಜಾತಂತ್ರ ಉಳಿಯಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಎ.ಮಂಜು ಪಕ್ಷ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದು, ಅವರಿಗೆ ನಾಡಿನ ಜನರು ಧಿಕ್ಕಾರ ಹಾಕಬೇಕು. ಯಾವುದೇ ಕಾರಣಕ್ಕೂ ಆತನಿಗೆ ಮತ ಹಾಕಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

‌ಗಂಡಸಿಯಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ, ‘ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ದೇಶ, ಪ್ರಜಾಪ್ರಭುತ್ವ, ರೈತರ ಉಳಿವಿಗಾಗಿ ಏಕ ಚಕ್ರಾಧಿಪತ್ಯ ಸ್ಥಾಪಿಸಲು ಹೊರಟಿರುವ ಮೋದಿ ಹಾಗೂ ಬಿಜೆಪಿ ಶಕ್ತಿ ಕುಗ್ಗಿಸಲು ಶಪಥ ಮಾಡಿ ಒಂದಾಗಿದ್ದೇವೆ’ ಎಂದರು.

‘ಗಂಡಸಿಯನ್ನು ತಾಲ್ಲೂಕು ಮಾಡಬೇಕೆನ್ನುವ ಬೇಡಿಕೆ ಇದೆ. ಇದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಗಮನಕ್ಕೆ ತರಲಾಗುವುದು. ತುಮಕೂರು ಜಿಲ್ಲೆಯ ಜನರ ನೀರಿನ ಸಮಸ್ಯೆ ಬಗ್ಗೆಯೂ ಅರಿವು ಇದೆ. ಎಲ್ಲ ಸಮಸ್ಯೆಗೂ ಪರಿಹಾರ ಇದೆ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಐದು ವರ್ಷದ ಆಡಳಿತಾವಧಿಯಲ್ಲಿ ಮೋದಿ ಅವರು, ಕೊಟ್ಟ ಮಾತು ಉಳಿಸಿಕೊಂಡಿಲ್ಲ, ನಂಬಿಕೆ ದ್ರೋಹ ಮಾಡಿದ್ದಾರೆ. ಮೋದಿ ಈ ದೇಶಕಂಡ ಮಹಾನ್ ಸುಳ್ಳುಗಾರ. ಚೌಕಿದಾರ್‌ ಅಲ್ಲ ಭ್ರಷ್ಟಾಚಾರದಲ್ಲಿ ಭಾಗಿದಾರ ಎಂದು ಕಿಡಿಕಾರಿದರು.

ದಲಿತರನ್ನು ಬೆತ್ತಲೆ ಮಾಡಿ ದೌರ್ಜನ್ಯವೆಸಗಲಾಗಿದೆ. ಅಲ್ಪಸಂಖ್ಯಾತರನ್ನು ಗೋ ರಕ್ಷಣೆ ಹೆಸರಲ್ಲಿ ಹತ್ಯೆ ಮಾಡಿದ್ದಾರೆ.

ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ಸಂವಿಧಾನ ಬದಲಿಸುತ್ತೇನೆ ಎಂದರೆ, ಆರ್‌ಎಸ್‌ಎಸ್‌ ಸರ ಸಂಚಾಲಕ ಮೋಹನ್‌ ಭಾಗವತ್‌ ಮೀಸಲಾತಿ ನಿಲ್ಲಿಸಬೇಕು ಎನ್ನುತ್ತಾರೆ. ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಅವರು ಸಂವಿಧಾನ ಬದಲಾವಣೆ ಆಗಬೇಕು ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

27 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ. ಈಶ್ವರಪ್ಪ ಯೋಗ್ಯತೆಗೆ ಕುರುಬ ಸಮುದಾಯದ ಒಬ್ಬರಿಗೆ ಟಿಕೆಟ್‌ ಕೊಡಿಸಲು ಆಗಲಿಲ್ಲ ಎಂದು ಅವರನ್ನು ಏಕ ವಚನದಲ್ಲಿ ತರಾಟೆಗೆ ತೆಗೆದುಕೊಂಡರು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್‌.ಬಾಲಕೃಷ್ಣ, ಪ್ರಜ್ವಲ್ ರೇವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌, ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಹನುಮಪ್ಪ, ಬಿಳಿಚೌಡಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT