ನೆಲದ ಮೇಲೆ ಮಲಗಿದ ರೋಗಿಗಳು

ಸೋಮವಾರ, ಜೂಲೈ 22, 2019
27 °C
ಅನುಮತಿ ಇಲ್ಲದೆ ಕಣ್ಣಿನ ಶಸ್ತ್ರಚಿಕಿತ್ಸೆ

ನೆಲದ ಮೇಲೆ ಮಲಗಿದ ರೋಗಿಗಳು

Published:
Updated:
Prajavani

ಹಾಸನ: ವರ್ಧಮಾನ್ ಜೈನ್ ಖಾಸಗಿ ನೇತ್ರಾಲಯದಲ್ಲಿ ಅನುಮತಿ ಇಲ್ಲದೆ 14 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ನಗರದ ಬಿ.ಎಂ. ರಸ್ತೆಯಲ್ಲಿ ಮೂರು ದಿನಗಳ ಹಿಂದಷ್ಟೇ ಕಾರ್ಯಾರಂಭ ಮಾಡಿರುವ ವರ್ಧಮಾನ್ ಜೈನ್ ನೇತ್ರಾಲಯದಲ್ಲಿ ಗುರುವಾರ ಲಘು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದ 14 ಮಂದಿಯನ್ನೂ ಆಸ್ಪತ್ರೆಯ ಕೊಠಡಿಯ ಚಿಕ್ಕ ಜಾಗದಲ್ಲಿ ನೆಲದ ಮೇಲೆ ಮಲಗಿಸಲಾಗಿದೆ.

ಹಾಸನ ತಾಲ್ಲೂಕು ಕಟ್ಟಾಯ ಗ್ರಾಮದಲ್ಲಿ ಇತ್ತೀಚೆಗೆ ಕಣ್ಣಿನ ಸಮಸ್ಯೆ ತಪಾಸಣೆ, ಕ್ಯಾಂಪ್ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ, 14 ಜನರನ್ನು ಆಯ್ಕೆ ಮಾಡಿ ಹಾಸನಕ್ಕೆ ಕರೆ ತಂದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಆರಂಭಗೊಂಡಿರುವ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹೋಗಿದ್ದಾರೆ. ಆ ನಂತರ ಆಸ್ಪತ್ರೆ ಸಿಬ್ಬಂದಿ ಖಾಲಿ ಬೆಡ್ ಇದ್ದರೂ, ನೆಲದ ಮೇಲೆ ಮಲಗಿಸಿದ್ದಾರೆ.

‘ಚಿಕಿತ್ಸೆಗೆ ಒಳಗಾದ 9 ಮಹಿಳೆಯರು ಹಾಗೂ 5 ಮಂದಿ ಪುರುಷರ ಪೈಕಿ ಬಹುತೇಕರು ವಯೋವೃದ್ಧರು. ರೋಗಿಗಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಕೂಡಲೇ ಆಸ್ಪತ್ರೆ ಮುಚ್ಚಬೇಕು’ ಎಂದು ರೋಗಿಯ ಸಂಬಂಧಿ ಮೋಹನ್‌ ಆಗ್ರಹಿಸಿದರು.

‘ಉಚಿತವಾಗಿ ಕಣ್ಣಿನ ಆಪರೇಷನ್ ಮಾಡುತ್ತೇವೆ’ ಎಂದು ಕರೆತಂದು ಈ ರೀತಿ ನಡೆಸಿಕೊಂಡಿರುವುದಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಆಸ್ಪತ್ರೆಯಲ್ಲಿ ಗದ್ದಲ-ಗೊಂದಲ ಉಂಟಾಗಿತ್ತು.

ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌, ‘ವರ್ಧಮಾನ್ ಜೈನ್ ನೇತ್ರಾಲಯಕ್ಕೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಅನುಮತಿ ಇರುವುದು ಮಂಡ್ಯದಲ್ಲಿ ಮಾತ್ರ. ಅಲ್ಲಿಗೆ ರೋಗಿಗಳನ್ನ ಕರೆದೊಯ್ದು ಆಪರೇಷನ್ ಮಾಡುವ ಬದಲು, ಹಣ ಉಳಿತಾಯದ ಆಸೆಯಿಂದ ಹಾಸನದಲ್ಲೇ ಕಣ್ಣಿನ ಆಪರೇಷನ್ ಮಾಡಲಾಗಿದೆ. ಇಲ್ಲಿ ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಕೂಡಲೇ ಆಸ್ಪತ್ರೆ ಬಂದ್ ಗೆ ಆದೇಶ ಮಾಡಿದ ಅವರು, ಕಾರಣ ಕೇಳಿ ಆಸ್ಪತ್ರೆ ಆಡಳಿತ ಮಂಡಳಿಗೂ ನೋಟಿಸ್ ನೀಡಿದ್ದಾರೆ.

‘ಎಲ್ಲ ರೋಗಿಗಳನ್ನು ಖಾಸಗಿ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಗುಣಮುಖರಾದ ನಂತರ ಮನೆಗೆ ಕಳಿಸಲಾಗುವುದು’ ಎಂದು ಹೇಳಿದರು.

ವರ್ಧಮಾನ್ ಜೈನ್ ನೇತ್ರಾಲಯ ಪರವಾನಗಿ ಪಡೆದು ಮಂಡ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ಅರೋಗ್ಯ ಇಲಾಖೆ ಸಹಭಾಗಿತ್ವದೊಂದಿಗೆ ಬಡ ರೋಗಿಗಳಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ಒಬ್ಬ ರೋಗಿ ಕಡೆಯಿಂದ ತಲಾ ₹ 2 ಸಾವಿರ ಖಾಸಗಿ ಆಸ್ಪತ್ರೆಯವರಿಗೆ ಸಿಗಲಿದೆ. ಆ ಕಾರಣಕ್ಕೆ ರಾಜ್ಯದ ವಿವಿಧೆಡೆ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !