ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಮೂಲ್‌ಗೆ ₹36 ಕೋಟಿ ನಿವ್ವಳ ಲಾಭ: ಎಚ್‌.ಡಿ.ರೇವಣ್ಣ

ವರ್ಷದಲ್ಲಿ ₹1,450 ಕೋಟಿ ವಹಿವಾಟು: ಎಚ್‌.ಡಿ.ರೇವಣ್ಣ
Last Updated 13 ನವೆಂಬರ್ 2020, 12:28 IST
ಅಕ್ಷರ ಗಾತ್ರ

ಹಾಸನ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾಮೂಲ್ ) 2019–20ನೇ ಸಾಲಿನಲ್ಲಿ ₹1450 ಕೋಟಿ ವಹಿವಾಟು ನಡೆಸುವ ಮೂಲಕ ₹36 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಒಕ್ಕೂಟ ಅಧ್ಯಕ್ಷಎಚ್‌.ಡಿ.ರೇವಣ್ಣ ತಿಳಿಸಿದರು.

ಸಹಕಾರ ಸಂಘಗಳ ಕಾಯ್ದೆ ಅನ್ವಯ ಡಿವಿಡೆಂಡ್‌ ಮತ್ತು ಬೋನಸ್‌ ಅನ್ನು ಸಂಘಗಳಿಗೆ ಪಾವತಿಸಲಾಗುವುದು. ಈಗಾಗಲೇ ಶೇಕಡಾ 5 ಬೋನಸ್‌ ಹಾಗೂ ಶೇ 10 ಡಿವಿಡೆಂಡ್‌ ಸೇರಿ ₹50 ಕೋಟಿ ರೈತರಿಗೆ ನೀಡಲಾಗಿದೆ. ಪ್ರಸ್ತುತ 11 ಲಕ್ಷ ಲೀಟರ್‌ ಶೇಖರಣೆಯೊಂದಿಗೆ ಹಾಸನ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಸೇನೆಗೆ ವರ್ಷಕ್ಕೆ 80 ಲಕ್ಷ ಲೀಟರ್‌ ಯುಎಚ್‌ಟಿ ಹಾಲನ್ನು ಶ್ರೀನಗರ, ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ನಿತ್ಯ 5 ಲಕ್ಷ ಲೀಟರ್‌ ಹಾಲು ಮಾರಾಟಕ್ಕೆ ಅವಕಾಶ ನೀಡುವಂತೆ ಕೆಎಂಎಫ್‌ಗೆ ಪತ್ರ ಬರೆಯಲಾಗಿದೆ. ಹೊರ ರಾಜ್ಯದ ಖಾಸಗಿ ಸಂಸ್ಥೆಗಳ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ದಶಕಗಳಿಂದ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಕೋವಿಡ್‌ನಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದು ಹಾಲಿನ ಪೌಡರ್‌, ಬೆಣ್ಣೆ, ತುಪ್ಪ ಸೇರಿ ₹206 ಕೋಟಿ ದಾಸ್ತಾನು ಇದೆ ಎಂದರು.

ಅಲ್ಲದೇ ಮಹತ್ವಾಕಾಂಕ್ಷಿ ಯೋಜನೆಯಾದ ₹400 ಕೋಟಿ ವೆಚ್ಚದ ಮೆಗಾ ಡೇರಿ ನಿರ್ಮಾಣ ಕಾರ್ಯ ಮುಂದಿನ ವರ್ಷ ಪ್ರಾರಂಭಿಸಲಾಗುವುದು. 15 ಲಕ್ಷ ಲೀಟರ್ ಸಾಮರ್ಥ್ಯ, 60 ಮೆಟ್ರಿಕ್‌ ಟನ್‌ ಹಾಲಿನ ಪುಡಿ ಘಟಕ, ಹಾಲಿನ ಪುಡಿ ಮತ್ತು ಬೆಣ್ಣೆ ಬ್ಲಿಸ್ಟರ್‌ ಪ್ಯಾಕ್‌ ಮಾಡುವ ರೀಟೆಲ್‌ ಪ್ಯಾಕಿಂಗ್ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ ಎಂದು ವಿವರಿಸಿದರು.

ಸಿಎಸ್‌ಆರ್‌ ನಿಧಿಯಿಂದ ₹1.25 ಕೋಟಿ ವೆಚ್ಚದಲ್ಲಿ ಶಾಲಾ, ಕಾಲೇಜುಗಳಿಗೆ ಕಂಪ್ಯೂಟರ್‌ ನೀಡಲಾಗಿದೆ. ಪ್ರಸಕ್ತ ವರ್ಷ ಮತ್ತೆ ₹ 50 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ, ಕಾಲೇಜುಗಳಿಗೆ ಕಂಪ್ಯೂಟರ್‌ ನೀಡಲಾಗುವುದು ಎಂದರು.

ಕೋವಿಡ್‌ ಪೀಡಿತರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಜಿಲ್ಲೆಯಲ್ಲಿ 48 ಸಾವಿರ ಕುಟುಂಬಗಳಿಗೆ ವೃದ್ಧಾಪ್ಯ ವೇತನ ಬಿಡುಗಡೆ ಆಗಿಲ್ಲ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಒಕ್ಕೂಟದ ವ್ಯವಸ್ಥಾಪಕ ಗೋಪಾಲಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT