ಸೋಮವಾರ, ಆಗಸ್ಟ್ 19, 2019
24 °C
ನಿಖಿಲ್‌, ಪ್ರಜ್ವಲ್‌ ಸ್ಪರ್ಧೆ ಕಪೋಲ ಕಲ್ಪಿತ: ಕುಮಾರಸ್ವಾಮಿ

ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ: ಕುಮಾರಸ್ವಾಮಿ

Published:
Updated:

ಹಾಸನ: ‘ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಇವತ್ತು ಒಳ್ಳೆಯವರು ರಾಜಕಾರಣ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಜಾತಿ ಪ್ರಭಾವ ರಾಜಕೀಯವನ್ನು ನಿಯಂತ್ರಿಸುತ್ತಿದೆ. ಇಂತಹ ವ್ಯವಸ್ಥೆಯಿಂದ ನಾನೇ ಹಿಂದೆ ಸರಿಯಬೇಕೆಂದು ಕೊಂಡಿದ್ದೇನೆ. ರಾಜಕೀಯದಲ್ಲಿ ಮುಂದುವರಿಯಬೇಕೆಂಬ ಹುಚ್ಚಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು. 

ಉಪಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಮತ್ತು ಪ್ರಜ್ವಲ್‌ ರೇವಣ್ಣ ಸ್ಪರ್ಧಿಸುವ ವಿಚಾರ ಕಪೋಲಕಲ್ಪಿತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಕುಟುಂಬವನ್ನು ಪದೇ ಪದೇ ಎಳೆಯಬೇಡಿ. ಹುಣಸೂರು, ಕೆ.ಆರ್.ಪೇಟೆ ಸೇರಿ ಉಳಿದ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳಿದ್ದಾರೆ. ಆದರೂ ಪ್ರಜ್ವಲ್, ನಿಖಿಲ್ ಹೆಸರನ್ನು ಯಾರೋ ತೇಲಿ ಬಿಟ್ಟಿದ್ದಾರೆ. ಈ ರೀತಿಯ ಕಪೋಲಕಲ್ಪಿತ ಸುದ್ದಿಗಳನ್ನು ಯಾರೂ ಮಾಡಬೇಡಿ’ ಎಂದು ಮನವಿ ಮಾಡಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಬಂದ ಒಂದೇ ವಾರದಲ್ಲಿ ಯಾರೂ ಮಾಡದಂಥ ಕೆಲಸಗಳು ಆರಂಭವಾಗಿವೆ. ಯಾವುದೇ ಸರ್ಕಾರ ಬಂದರೂ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ. ಆದರೆ, ಯಡಿಯೂರಪ್ಪ ಅವರು, ಕೆಲವು ಅಧಿಕಾರಿಗಳಿಗೆ ಪೋಸ್ಟಿಂಗ್ ಕೊಡದೆ ವರ್ಗ ಮಾಡಿದ್ದಾರೆ. ಇದು ಅಧಿಕಾರಿಗಳನ್ನು ಅವರು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ಗೇಲಿ ಮಾಡಿದರು.

‘ನಮ್ಮದು ಪಾಪದ ಸರ್ಕಾರವಿತ್ತು. ಈಗ ಪವಿತ್ರ ಸರ್ಕಾರ ಬಂದಿದೆ’ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ‘ಈಗ ಏನೇನು ನಡೆಯುತ್ತಿದೆ ಎಂಬುದು ಗೊತ್ತು. ಜನರೇ ತೀರ್ಮಾನ ಕೈಗೊಳ್ಳುತ್ತಾರೆ. ನಾನು ಎರಡು ಬಾರಿ ಸಿ.ಎಂ ಆಗಿದ್ದು ದೇವರು ಕೊಟ್ಟ ಅವಕಾಶ. ನನಗೆ ಅಧಿಕಾರಕ್ಕಿಂತ ನಾಡಿನ ಜನರ ಹಿತ ಮುಖ್ಯ. 14 ತಿಂಗಳು ಸಿ.ಎಂ ಆಗಿ ಆಡಳಿತ ನಡೆಸಿದ್ದು ತೃಪ್ತಿ ಇದೆ’ ಎಂದರು.

‘ಇಂದು ಕುತಂತ್ರ ರಾಜಕೀಯ ನಡೆಯುತ್ತಿದೆ’ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ, ಜಾತಿಯ ವ್ಯಾಮೋಹದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ’ ಎಂದು ಅಸಮಾಧಾನ ಹೊರ ಹಾಕಿದರಲ್ಲದೆ, ಮಾಧ್ಯಮಗಳ ವಿರುದ್ಧವೂ ಕಿಡಿ ಕಾರಿದರು.

ಸಚಿವ ಸಂಪುಟ ವಿಸ್ತರಣೆ ಬೇಡ. ಬಿಎಸ್‌ವೈ ಒಬ್ಬರೇ ಆರು ತಿಂಗಳು ಅಧಿಕಾರ ನಡೆಸಬಹುದು ಎಂದರು.

ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಅವರ ಬದಲಿಗೆ ಪಕ್ಷಕ್ಕೆ ನಿಷ್ಠಾವಂತರಾಗಿ ಕೆಲಸ ಮಾಡುತ್ತಿರುವ ಯಾರನ್ನಾದರೂ ಅಭ್ಯರ್ಥಿ ಮಾಡಲಾಗುವುದು ಎಂದು ಮಾಜಿ ಸಚಿವ ಸಾ.ರಾ. ಮಹೇಶ್‌ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Post Comments (+)