ಶನಿವಾರ, ಜೂನ್ 19, 2021
21 °C
ಲಾಕ್‌ಡೌನ್‌: ರಸ್ತೆಗಿಳಿಯದ ಜನ, ಅಂಗಡಿಗಳು ಸಂಫೂರ್ಣ ಬಂದ್‌

ಪ್ರಯಾಣಿಕರಿಲ್ಲದೆ ಭಣಗುಡುತ್ತಿರುವ ಬಸ್‌ ನಿಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ವಿಧಿಸಿರುವ ಕಠಿಣ ಲಾಕ್‌ಡೌನ್‌ಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ಜನರು ತರಕಾರಿ, ಹಣ್ಣು, ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು. ಹತ್ತು ಗಂಟೆಯಾಗುತ್ತಿದ್ದಂತೆ ಬಹುತೇಕರು ಸ್ವಯಂ ಪ್ರೇರಿತರಾಗಿ ಅಂಗಡಿ ಬಾಗಿಲುಗಳನ್ನು ಬಂದ್‌ ಮಾಡಿ ಸಹಕರಿಸಿದರು. ಕೆಲವರು ಇನ್ನೂ ವ್ಯಾಪಾರ ಮಾಡುತ್ತಿದ್ದರು. ಪೊಲೀಸರು ಅಂಗಡಿಗಳ ಬಳಿ ತೆರಳಿ ಮುಚ್ಚುವಂತೆ ಸೂಚನೆ ನೀಡಿದರು.

ಬೀದಿಬದಿ ವ್ಯಾಪಾರ ಸಂಪೂರ್ಣ ಸ್ಥಗಿತವಾಗಿತ್ತು. ಫಾಸ್ಟ್‌ ಫುಡ್‌ ಅಂಗಡಿಗಳೂ ಇರಲಿಲ್ಲ. ಹೋಟೆಲ್‌ ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿತ್ತು. ಆಸ್ಪತ್ರೆಗಳು, ಔಷಧ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸಿದವು. ಮದ್ಯದ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ಅವಕಾಶ ನೀಡಿದ್ದರಿಂದ ಗ್ರಾಹಕರು ಸರದಿ ಸಾಲಿನಲ್ಲಿ ನಿಂತು ಖರೀದಿಸಿದರು.

ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ, ಅನಗತ್ಯವಾಗಿ ಸಂಚರಿಸುವವರನ್ನು ತಡೆದು, ದಂಡ ವಿಧಿಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಅವರು ನಗರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಸಿಬ್ಬಂದಿಗೆ ಸೂಚನೆ ನೀಡಿದರು.

ಕೆಲವು ಆಸ್ಪತ್ರೆಗಳ ಮುಂಭಾಗ ಎಳನೀರು ಮಾರಾಟ ಕಂಡು ಬಂತು. ಕೃಷಿ ಚಟುವಟಿಕೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಇರಲಿಲ್ಲ. ನಗರದ ಕೆಲವು ಕಡೆ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿತ್ತು.

ಗಾರ್ಮೆಂಟ್ಸ್‌ ಹೊರತುಪಡಿಸಿ ನಗರದ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಚಾಲನೆಗೊಂಡವು. ನಗರ ಟ್ಯಾಕ್ಸಿ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಟ್ಯಾಕ್ಸಿಗಳು ಇದ್ದವು. ಆಟೊ ಸಂಚಾರ ವಿರಳವಾಗಿತ್ತು. ಆಸ್ಪತ್ರೆ, ಮದುವೆ ಹಾಗೂ ಇತರೆ ತುರ್ತು ಕಾರ್ಯನಿಮಿತ್ತ ತೆರಳುವವರು ತಮ್ಮ ವಾಹನಗಳಲ್ಲಿ ತೆರಳಿದರು.

ಕರ್ನಾಟಕ ರಸ್ತೆ ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದ್ದು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ ಭಣಗುಡುತ್ತಿದೆ. ಖಾಸಗಿ ಬಸ್‌ ಸಂಚಾರವೂ ಇರಲಿಲ್ಲ. ಹೇಮಾವತಿ ವೃತ್ತ, ಎನ್‌.ಆರ್‌.ವೃತ್ತ, ಬಿ.ಎಂ ರಸ್ತೆ ಬಿಕೋ ಎನ್ನುತ್ತಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು