ಭಾನುವಾರ, ಮಾರ್ಚ್ 7, 2021
32 °C

ಹಾಸನ ಜಿಲ್ಲೆಯ ಹೆಸರಿನಲ್ಲಿ ರಾಜಕಾರಣ ಬೇಡ: ಪ್ರೀತಂ ಜೆ.ಗೌಡ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ’ಒಂದೆಡೆ ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿದೆ ಎಂದು ಜೆಡಿಎಸ್‌ ಶಾಸಕರು ಹೇಳುತ್ತಾರೆ. ಇನ್ನೊಂದೆಡೆ ಹಾಸನ ಕ್ಷೇತ್ರಕ್ಕೆ ಹೆಚ್ಚು ಹಣ ಬಿಡುಗಡೆಯಾಗಿದೆ ಅಂತಾರೆ. ಜಿಲ್ಲೆಯ ಹೆಸರು ಹೇಳಿಕೊಂಡು ರಾಜಕೀಯ ಮಾಡಬಾರದು’ ಎಂದು ಶಾಸಕ ಪ್ರೀತಂ ಗೌಡ ಅವರು ಜೆಡಿಎಸ್‌ ಶಾಸಕರಿಗೆ ತಿರುಗೇಟು ನೀಡಿದರು.

ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿಲ್ಲ. ಹಾಸನ ಕ್ಷೇತ್ರಕ್ಕೆ ನನ್ನ ಪ್ರಭಾವ ಬಳಸಿ ಹೆಚ್ಚು
ಅನುದಾನ ತಂದಿದ್ದೇನೆ. ಹಿಂದೆ ಅತಿವೃಷ್ಟಿ, ಅನಾವೃಷ್ಟಿ ಬಂದಾಗ ಪಟ್ಟಿಯಲ್ಲಿ ಹೊಳೆನರಸೀಪುರ ಸೇರುತ್ತಿತ್ತು. ಅದೇ ರೀತಿ ನಾನು ಮಾಡಿದ್ದೇನೆ. ಮೂಗರ್ಜಿ ಬರೆದು ಹೆಜ್ಜೆ, ಹೆಜ್ಜೆಗೂ ತೊಂದರೆ ನೀಡುವುದೇ ರಾಜಕಾರಣ ಎಂದು ಶಾಸಕ ಎಚ್.ಡಿ.ರೇವಣ್ಣ ಭಾವಿಸಿದ್ದರೆ ಅದೆಲ್ಲವನ್ನು ಮೆಟ್ಟಿ ನಿಂತು ಹೆಚ್ಚು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಹೊಳೆನರಸೀಪುರ ಹಂಗರಹಳ್ಳಿ ರೈಲ್ವೆ ಮೇಲ್ಸೆತುವೆ ಮಾಡಿಸಿದವರಿಗೆ ಹಾಸನದ ರೈಲ್ವೆ ಮೇಲ್ಸೇತುವೆ
ಮಾಡಿಸಲು ಏಕೆ ಆಗಲಿಲ್ಲ? ತಾನು ಮಾಡಿದರೆ ಸಾಧನೆ, ಮತ್ತೊಬ್ಬರು ಮಾಡಿದರೆ ಅಸೂಯೆ. ದ್ವಂದ್ವ ನೀತಿಯ ರಾಜಕಾರಣವನ್ನು ರೇವಣ್ಣ ಬಿಡಬೇಕು ಎಂದರು.

ಜಿಲ್ಲೆಯ ಜನತೆ ಅನುಭವಿಸುತ್ತಿದ್ದ ತೊಂದರೆ ಗಮನಿಸಿ ಕ್ಷೇತ್ರದ ಶಾಸಕನಾಗಿ ರೈಲ್ವೆ ಮೇಲ್ಸೇತುವೆಗೆ ಇದ್ದ
ಅಡೆತಡೆ ನಿವಾರಣೆ ಮಾಡಿ ಕಾಮಗಾರಿ ಮಾಡಿಸುತ್ತಿದ್ದೇನೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ. ಎನ್‌.ಆರ್‌.
ವೃತ್ತದಿಂದ ಬಿ.ಎಂ ರಸ್ತೆಯ ಪೃಥ್ವಿ ಚಿತ್ರಮಂದಿರವರೆಗೆ ಕಟ್ಟಡಗಳನ್ನು ತೆರವು ಮಾಡಿದಾಗ ಯಾವ ಕಾನೂನು ಪಾಲನೆ ಮಾಡಿದರು? ಮುಸ್ಲಿಂ ಸೇರಿದಂತೆ ಯಾವುದೇ ಸಮುದಾಯಕ್ಕೂ ತೊಂದರೆ ನೀಡಿಲ್ಲ. ನಿಯಮ ಪ್ರಕಾರ ಕಾಮಗಾರಿಗೆ ಜಾಗ ಬಿಟ್ಟು ಕೊಟ್ಟವರಿಗೆ ಪರಿಹಾರ ನೀಡಲಾಗುತ್ತದೆ. 2021ರ ಡಿಸೆಂಬರ್‌ ವೇಳೆಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ಹೊಳೆನರಸೀಪುರಕ್ಕೆ ಪ್ರವಾಹ ಬರುತ್ತೇ, ಬರ ಬರುತ್ತೆ. ಅಧಿಕಾರಿಗಳ ಮೇಲೆ ಒತ್ತಡ, ಬೆದರಿಕೆ ತಂತ್ರ
ಉಪಯೋಗಿಸಿ ನಾಲ್ಕುಕೋಟಿ ಮಂಜೂರು ಮಾಡಿಸಿಕೊಂಡರು ಎಂದು ಪ್ರಶ್ನಿಸಿದರು.

ದಶಕಗಳ ಕಾಲ ರಾಜಕಾರಣ ಮಾಡಿ ಸಚಿವರಾಗಿ, ಅವರ ಸಹೋದರರೇ ಮುಖ್ಯಮಂತ್ರಿ, ತಂದೆ
ಪ್ರಧಾನಿಯಾದರೂ ಜಿಲ್ಲೆಯ ಜನರ ಋಣ ತೀರಿಸುವುದು ಬಾಕಿ ಇದೆ ಎನ್ನುವುದಾದರೆ ಇದುವರೆಗೆ
ಮಾಡಿದ್ದಾದರೂ ಏನು? ಆಲೂರು ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಏಕೆ ಸಾಧ್ಯವಾಗಲಿಲ್ಲ ಎಂದು
ಪ್ರಶ್ನಿಸಿದರು.

‘ನನ್ನ ಕ್ಷೇತ್ರದ ಅಭಿವೃದ್ಧಿಗೆ ರೇವಣ್ಣ ಅಡ್ಡಿಪಡಿಸುವುದು ಬೇಡ. ಅವರು ಅಧಿಕಾರದಲ್ಲಿದ್ದಾಗ ಜಿಲ್ಲೆಯ ಬಗ್ಗೆ
ಮಾತನಾಡಲಿ. ಹಾಸನದ ಮೇಲೆ ಅಷ್ಟೊಂದು ಆಸಕ್ತಿ ಇದ್ದರೆ ಮುಂದಿನ ಚುನಾವಣೆಯಲ್ಲಿ ಹಾಸನ
ಕ್ಷೇತ್ರದಿಂದಲೇ ಸ್ಪರ್ಧಿಸಲಿ’ ಎಂದು ಸವಾಲು ಹಾಕಿದರು.

ಹಾಸನ ತಾಲ್ಲೂಕಿನ ಸಾಲಗಾಮೆ, ಕಸಬಾದ 130 ಕೆರೆ ತುಂಬಿಸುವುದಕ್ಕೆ ವಿಸ್ತೃತ ಯೋಜನಾ ವರದಿ ತಯಾರುಗುತ್ತಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು