ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕೃಷಿ ಕಾಯ್ದೆಯಿಂದ ಸಮಸ್ಯೆಯಿಲ್ಲ

ಮೋದಿ ವಿರುದ್ಧ ಪ್ರತಿಭಟಿಸಲು ರೈತರನ್ನು ಎತ್ತಿ ಕಟ್ಟಿದ್ದಾರೆ: ಸಂಸದೆ ಶೋಭಾ ಕರಂದ್ಲಾಜೆ ಟೀಕೆ
Last Updated 25 ಡಿಸೆಂಬರ್ 2020, 13:07 IST
ಅಕ್ಷರ ಗಾತ್ರ

ಹಾಸನ: ನಗರ ನಕ್ಸಲರು, ದೇಶ ವಿರೋಧಿ ಘೋಷಣೆ ಕೂಗುವವರೆಲ್ಲ ರೈತರ ಹೆಸರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ
ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟಿಸಲು ಯಾವುದೇ ವಿಷಯ ಇಲ್ಲದ ಕಾರಣ ರೈತರನ್ನು ಎತ್ತಿಕಟ್ಟಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ನಗರದ ಎಚ್‍.ಎಂ.ಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ, ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಹಣ ಜಮಾ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ, ಜೆಎನ್‍ಯುನಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಉಮರ್ ಖಲೀದ
ಪ್ರತಿಭಟನೆಯಲ್ಲಿದ್ದಾರೆ. ರಾಷ್ಟ್ರ ದ್ರೋಹ ಕೆಲಸದಲ್ಲಿ ತೊಡಗುವ ಇವರಿಗೂ ಮತ್ತು ಶ್ರಮವಹಿಸಿ ದುಡಿಯುವ ರೈತರೊಂದಿಗೆ ಹೋಲಿಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಯಿಂದ ರೈತರಿಗೆ ಯಾವುದೇ ಸಮಸ್ಯೆಯಿಲ್ಲ. ಕಳೆದ 25 ವರ್ಷಗಳಿಂದ ಕೃಷಿ ಕಾಯ್ದೆ ಕುರಿತು ಚರ್ಚೆಯಾಗುತ್ತಲೇ ಇತ್ತು. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ತೊಂದರೆ ಅನುಭವಿಸುತ್ತಿದ್ದರೂ ಕಾಯ್ದೆಯಲ್ಲಿ ಬದಲಾವಣೆ ಮಾಡುವ ನಿರ್ಧಾರವನ್ನು ಯಾವ ಸರ್ಕಾರ ಕೈಗೊಂಡಿರಲಿಲ್ಲ. ಕಾಂಗ್ರೆಸ್ ಸಹ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ರದ್ದುಗೊಳಿಸುವುದಾಗಿ ಹೇಳಿತ್ತು. ಅಂದು ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದವರೆಲ್ಲ ಇಂದು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಅಧಿಕಾರಕ್ಕೆ ಬಂದರೆ ಎಪಿಎಂಸಿ ರದ್ದು ಮಾಡುವುದಾಗಿ ತಮಿಳುನಾಡಿನ ಡಿಎಂಕೆ ಹೇಳಿತ್ತು. ಕೃಷಿ ಸ್ಥಾಯಿ ಸಮಿತಿ ಸದಸ್ಯರಾಗಿದ್ದ ಮಧ್ಯಪ್ರದೇಶ ಸಿ.ಎಂ ಕಮಲನಾಥ್ ಅವರ ಸಲಹೆ, ಸೂಚನೆಗಳನ್ನು ಪರಿಗಣಿಸಿ ಕಾಯ್ದೆ ಜಾರಿಗೊಳಿಸಲಾಗಿದೆ. ಕಾಯ್ದೆಗೆ ವಿರೋಧಿಸುತ್ತಿರುವ ಕಮ್ಯುನಿಸ್ಟರು ತಾವು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಎಪಿಎಂಸಿ ಇಲ್ಲ ಎಂಬುದನ್ನು ಮೊದಲು ಅರಿಯಬೇಕು. ದೆಹಲಿ ಸಿ.ಎಂ ಅರವಿಂದ ಕೇಜ್ರಿವಾಲ್ ವಿಧಾನಸಭೆಯಲ್ಲಿ ಎಪಿಎಂಸಿ ರದ್ದುಪಡಿಸಿ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ, ಕೇಂದ್ರದ ವಿರುದ್ಧ ಹೋರಾಡುತ್ತಾರೆ. ಇದು ಇಬ್ಬಂದಿತನ ಅಲ್ಲವೇ ಎಂದು ಟೀಕಿಸಿದರು.

ನೂತನ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಭಾಗವಹಿಸುತ್ತಾರೆ. ರೈತರ ಹೋರಾಟ ಬೆಂಬಲಿಸಿ ಕೆನಡಾದ ಪ್ರಧಾನಿ ಮಾತನಾಡುತ್ತಾರೆ. 338 ಸಂಸದರನ್ನು ಹೊಂದಿರುವ ಕೆನಡಾದಲ್ಲಿ 18 ಸಿಖ್ ಸದಸ್ಯರಿದ್ದಾರೆ. ಬಿಂದ್ರನ್ ವಾಲೆ ಹತ್ಯೆ ನಂತರ ದೊಡ್ಡ ಸಂಖ್ಯೆಯಲ್ಲಿ ಸಿಖ್‍ರು ಅಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಅರಾಜಕತೆ ಸೃಷ್ಟಿಸಿದರೆ ತನಗೆ ಲಾಭ ಎಂಬುದನ್ನು ಆ ಸರ್ಕಾರ ಅರಿತಿದೆ. ಆದ್ದರಿಂದ ಈ ಹೋರಾಟಕ್ಕೆ ಬೆಂಬಲ ನೀಡಿದೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ದೇಶದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದರು. ಪ್ರಧಾನ ಮಂತ್ರಿ ಗ್ರಾಮ ಸಡಕ್, ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮೂಲಕ ಇಂದಿಗೂ ಜನಮಾನಸದಲ್ಲಿ ನೆಲೆಯೂರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಸುರೇಶ್, ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್, ಬಿ.ಆರ್. ಗುರುದೇವ್, ಮುಖಂಡ ನವಿಲೆ ಅಣ್ಣಪ್ಪ, ರೈತ ಮಹಿಳೆ ಹೇಮಾ ಅನಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT