ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆಯಿಂದ ಅಡ್ಡಪರಿಣಾಮವಿಲ್ಲ

ತಾ.ಪಂ ಸಭೆಯಲ್ಲಿ ಆರೋಗ್ಯಾಧಿಕಾರಿ ವಿಜಯ್ ಕುಮಾರ್‌ ಸ್ಪಷ್ಟನೆ
Last Updated 20 ಜನವರಿ 2021, 13:01 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಜಿಲ್ಲೆಯಲ್ಲಿ ಈವರೆಗೂ ಲಸಿಕೆ
ಪಡೆದವರು ಆರೋಗ್ಯವಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್‌ ಕುಮಾರ್‌ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,
ಕೋವಿಡ್‌ ಎರಡನೇ ಅಲೆ ತಡೆಯಲು ಲಸಿಕೆ ಪಡೆಯಬೇಕು. ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳಲ್ಲಿ
ಯಾವುದೇ ವ್ಯತ್ಯಾಸವಿಲ್ಲ. ಲಸಿಕೆ ಪಡೆದವರಲ್ಲಿ ಮೈಕೈ ನೋವು ಮತ್ತು ಜ್ವರ ಬರಬಹುದು ಎಂದು
ವಿವರಿಸಿದರು.

ಗರ್ಭಿಣಿಯರು, ಹಾಲುಣಿಸುವ ತಾಯಂದಿರು, 18 ವರ್ಷ ಒಳಗಿನ ಮಕ್ಕಳು ಮತ್ತು ಕೋವಿಡ್ ಸೋಂಕಿತರಿಗೆ
ಲಸಿಕೆ ನೀಡುವಂತಿಲ್ಲ ಎಂದು ಸರ್ಕಾರದ ಆದೇಶವಿದೆ. ಏಕೆಂದರೆ ಅವರ ಮೇಲೆ ಇನ್ನೂ ಪ್ರಯೋಗ ಮಾಡಿಲ್ಲ
ಎಂದರು.

ತಾಲ್ಲೂಕಿನಲ್ಲಿ 4 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದು, ಅಂಕಪುರದ ಒಬ್ಬ ವ್ಯಕ್ತಿ ಸರ್ಕಾರಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯದೆ ಮೃತಪಟ್ಟರು. ಉಳಿದ ಮೂರು ಪ್ರಕರಣ ಮಂಗಳೂರಿನವರು. ಕಳೆದ ವರ್ಷಕ್ಕೆ ಹೋಲಿಸಿದರೆ
ಈ ಬಾರಿ ಕೋವಿಡ್‌ ಕಾರಣದಿಂದ ಡೆಂಗಿ ಮತ್ತು ಚಿಕೂನ್‌ ಗುನ್ಯ ಪ್ರಕರಣಗಳು ತೀರ ಕಡಿಮೆಯಾಗಿವೆ ಎಂದು
ತಿಳಿಸಿದರು.

ಕೋವಿಡ್‌ ಕಾರಣದಿಂದ ನಿಲ್ಲಿಸಿದ್ದ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮತ್ತೆ ಆರಂಭಿಸಲಾಗಿದೆ. ಮೂರು ತಿಂಗಳಿಗೊಮ್ಮೆ
ಕುಡಿಯುವ ನೀರಿನ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ಅಲ್ಲದೇ ತಾಲ್ಲೂಕಿನಲ್ಲಿ ಎಲ್ಲಿಯೂ ಹಕ್ಕಿಜ್ವರ ಕಂಡು
ಬಂದಿಲ್ಲ. ಹಾಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಇಲಾಖೆ ವತಿಯಿಂದ ಅಗತ್ಯ ಮುಂಜಾಗ್ರತೆ
ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸದಸ್ಯ ಸತೀಶ್‌ ಮಾತನಾಡಿ, ಕಾರ್ಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ತೊಂದರೆ
ಅನುಭವಿಸುತ್ತಿದ್ದು, ಕೂಡಲೇ ತಾತ್ಕಾಲಿಕವಾಗಿಯಾದರೂ ಒಬ್ಬರನ್ನು ನೇಮಕ ಮಾಡಬೇಕೆಂದು
ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಚ್‌ಒ, ಗುರುವಾರದಿಂದಲೇ ಒಬ್ಬ ವೈದ್ಯರನ್ನು
ನಿಯೋಜಿಸಲಾಗುವುದು ಎಂದರು.

‘ತಾಲ್ಲೂಕಿನಲ್ಲಿ ವಿದ್ಯಾರ್ಥಿ ನಿಲಯಗಳು ಪ್ರಾರಂಭವಾಗಿವೆ. ಅಂತಿಮ ಪದವಿ, ದ್ವಿತೀಯ ಪಿಯುಸಿ ಹಾಗೂ
ಎಸ್ಸೆಸ್ಸೆಲ್ಸಿ ಸೇರಿ 800 ವಿದ್ಯಾರ್ಥಿಗಳಿಗೆ ಈಗಾಗಲೇ ಅವಕಾಶ ಮಾಡಿಕೊಡಲಾಗಿದೆ. ಹೊಸ ದಾಖಲಾತಿಗೆ
ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಒಂದು ಬಾರಿ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಕೋವಿಡ್‌
ಪರೀಕ್ಷೆ ಮಾಡಿಸಿದ್ದು, ಯಾರಿಗೂ ಪಾಸಿಟಿವ್‌ ಪತ್ತೆಯಾಗಿಲ್ಲ. ವಿದ್ಯಾರ್ಥಿ ನಿಲಯಗಳೇ ಕ್ವಾರಂಟೈನ್‌
ಕೇಂದ್ರವಾಗಿದ್ದರಿಂದ ಸ್ಯಾನಿಟೈಸರ್‌ ಸಿಂಪಡಣೆ ಮಾಡಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ
ಸಹಾಯಕ ನಿರ್ದೇಶಕ ಎಚ್‌.ಎಂ.ಸತೀಶ್‌ ತಿಳಿಸಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್‌. ರವಿ ಮಾತನಾಡಿ, ಆಲೂಗಡ್ಡೆ ಬಿತ್ತನೆ ಬೀಜವನ್ನು
ಪಂಜಾಬ್‌ನ ಜಲಂದರ್‌ನಿಂದ ತರಿಸಲಾಗುತ್ತಿತ್ತು. ಆದರೆ ಈಗ ಸೋಮನಹಳ್ಳಿ ಕಾವಲಿನಲ್ಲಿ ‘ಕುಪ್ರಿ ಜ್ಯೋತಿ’
ಮತ್ತು ‘ಕುಪ್ರಿ ಹಿಮಾಲಿನಿ’ ಎಂಬ ಎರಡು ತಳಿ ಆಲೂಗಡ್ಡೆ ಅಂಗಾಂಶ ಕೃಷಿ ಮಾಡಲಾಗಿದೆ. ಇದರಲ್ಲಿ ಕುಪ್ರಿ
ಹಿಮಾಲಿನಿ ಉತ್ತಮವಾಗಿ ಬಂದಿದ್ದು, ಗಡ್ಡೆ ಬಿಡಲು ಪ್ರಾರಂಭವಾಗಿದೆ. ಅಂಗಾಂಶ ಕೃಷಿ ಮುಖಾಂತರ ಎಕರೆಗೆ 35 ಸಾವಿರ ಹಾಗೂ ಹೆಕ್ಟೇರ್‌ಗೆ 1 ಲಕ್ಷ ಆಲೂಗಡ್ಡೆ ಸಸಿ ಅಗತ್ಯವಿದೆ. ವಿಯಾಟ್ನಂ ತಂತ್ರಜ್ಞಾನ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಜಿಲ್ಲೆ ಆಲೂಗಡ್ಡೆ ಬಿತ್ತನೆ ಬೀಜದಲ್ಲಿ ಸ್ವಾವಲಂಬಿಯಾಗಲಿದೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಚ್‌.ಕೆ.ರಂಜಿನಿ, ಉಪಾಧ್ಯಕ್ಷೆ ಬೇಬಿ, ಕಾರ್ಯನಿರ್ವಾಹಕ ಅಧಿಕಾರಿ
ಕೆ.ಎಲ್‌. ಯಶ್ವಂತ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದಿನೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT