ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ಕೋವಿಡೇತರ ರೋಗಿಗಳ ಪರದಾಟ

ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಲಭ್ಯ, ಖಾಸಗಿ ಕ್ಲಿನಿಕ್‌ಗಳಿಗೆ ಅಲೆದಾಟ
Last Updated 17 ಮೇ 2021, 2:51 IST
ಅಕ್ಷರ ಗಾತ್ರ

ಹಾಸನ: ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಜಿಲ್ಲೆಯಲ್ಲಿ ಕೋವಿಡೇತರ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ.ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ತೀವ್ರ ತೊಂದರೆ ಯಿಂದ ಬಳಲುತ್ತಿರುವ ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ.

ಕೊರೊನಾ ಸೋಂಕು ಇರಬಹುದು ಎಂಬ ಕಾರಣಕ್ಕೆ ವೈದ್ಯರು ಚಿಕಿತ್ಸೆ ನಿರಾಕರಿ ಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೆಲ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುವ ಮುನ್ನ ಆರ್‌ಟಿ–ಪಿಸಿಆರ್‌ ವರದಿ ಕೇಳಲಾಗುತ್ತಿದೆ. ಹಿಮ್ಸ್‌ ಕೋವಿಡ್ ಆಸ್ಪತ್ರೆಯ 400 ಹಾಸಿಗೆಗಳು ಹಾಗೂ 75 ಐಸಿಯು ಹಾಸಿಗೆಗಳ ಸೌಲಭ್ಯ ಹೊಂದಿದೆ.

ಸೋಂಕಿತರ ಸಂಖ್ಯೆ ಹೆಚ್ಚಾಗಿ ಎಲ್ಲ ಹಾಸಿಗೆಗಳು ಭರ್ತಿಯಾಗಿವೆ. ನಗರದ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್‌, ಅಲ್ಲದೇ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಕೋವಿಡ್‌ ಚಿಕಿತ್ಸಾ ಕೇಂದ್ರಗಳಲ್ಲಿ ನೂರಾರು

ಕೋವಿಡ್‌ ರೋಗಿಗಳಿದ್ದಾರೆ. ವಿವಿಧ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಅಪಘಾತ ಸೇರಿದಂತೆ ತುರ್ತು ಚಿಕಿತ್ಸೆಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಕೆಳ ಮಹಡಿಯಲ್ಲಿ

300 ಹಾಸಿಗೆಗಳನ್ನು ಅನ್ಯ ಕಾಯಿಲೆ ಗಳ ರೋಗಿಗಳಿಗೆ ಮೀಸಲಿರಿಸಲಾಗಿದೆ. ಆದರೆ, ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ಅನ್ಯ ರೋಗಗಳ ಚಿಕಿತ್ಸೆಗೆ ರೋಗಿಗಳು ಪರದಾಟ ನಡೆಸುವುದು ಮಾತ್ರ ತಪ್ಪಿಲ್ಲ.

ನಗರದ 11 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ ನೀಡಲಾಗುತ್ತಿದೆ. ಅಂಥ ಆಸ್ಪತ್ರೆಗಳಿಗೆ ಅನ್ಯ ಕಾಯಿಲೆಗಳ

ರೋಗಿಗಳು ಹೋಗಲು ಭಯಪಡು ತ್ತಿದ್ದಾರೆ. ಜೊತೆಗೆ ಲಾಕ್‌ಡೌನ್‌ ಕಾರಣದಿಂದ ವಾಹನಗಳ ವ್ಯವಸ್ಥೆ ಇಲ್ಲದೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರಲು ಕಷ್ಟವಾಗಿದೆ. ಸಣ್ಣಪುಟ್ಟ ಕಾಯಿಲೆಗಳಿಂದ ಬಳಲುತ್ತಿರುವವರು

ಆಸ್ಪತ್ರೆಗಳಿಗೆ ಬರದೆ ಮಾತ್ರೆ ಸೇವಿಸಿ ಚಿಕಿತ್ಸೆ ಮುಂದೂಡುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ಖಾಸಗಿ ಆಸ್ಪತ್ರೆಗಳಿಗೆ ತೆರಳಿದ ಬಡ ಹಾಗೂ ಮಧ್ಯಮ ವರ್ಗದ ಜನರು ದುಬಾರಿ ವೆಚ್ಚ ಭರಿಸಲಾಗದೆ, ಚಿಕಿತ್ಸೆ ದೊರೆಯದೇ ನರಳುವಂತಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ವ್ಯಾಪಿಸಿದ ಬಳಿಕ ಬಹುತೇಕ ಕ್ಲಿನಿಕ್‌ಗಳು ಬಾಗಿಲು ತೆರೆದಿಲ್ಲ.

ಆದ್ದರಿಂದ ಗಂಭೀರವಲ್ಲದ ರೋಗಗಳಿಂದ ಬಳಲುತ್ತಿರುವವರು ಹಾಗೂ ಗ್ರಾಮೀಣ ಭಾಗದ ಜನರು ಮನೆ ಮದ್ದು, ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ನರ್ಸ್‌ಗಳನ್ನು ಕೋವಿಡ್‌ ಚಿಕಿತ್ಸೆಗೆ

ನಿಯೋಜನೆ ಮಾಡಿರುವುದರಿಂದ ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ಕೊರತೆ ಉಂಟಾಗಿದೆ. ತುರ್ತು ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗುತ್ತಿದೆ.

‘ಕೆಲ ಕ್ಲಿನಿಕ್‌ಗಳಲ್ಲಿ ಎಂಬಿಬಿಎಸ್ ವೈದ್ಯರು ಇದ್ದರೆ, ಉಳಿದ ಕಡೆ ಆಯುರ್ವೇದ ವೈದ್ಯರು ಕಾರ್ಯನಿರ್ವ ಹಿಸುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ರೋಗಿಗಳನ್ನು ಸ್ಟೆತಾಸ್ಕೋಪ್‌ನಿಂದ ಪರೀಕ್ಷೆ ಮಾಡು ತ್ತಿಲ್ಲ. ರೋಗಿಗಳನ್ನು ವೈದ್ಯರು ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಸಾಮಾನ್ಯ ಜ್ವರ, ಶೀತ ಮತ್ತು ಇತರ ಆರೋಗ್ಯ ಸಮಸ್ಯೆ ತೋರಿಸಿಕೊಳ್ಳುವ ಜನರಿಗೆ ಮೊದಲು ಕೋವಿಡ್ ತಪಾಸಣೆ ಮಾಡಿಸಿಕೊಂಡು ಬನ್ನಿ ಎಂಬ ಸಲಹೆ ನೀಡುತ್ತಿದ್ದಾರೆ’ ಎಂದು ಜಾನೇಕರೆ ನಿವಾಸಿ ಜಯರಾಜ್ ಹೇಳಿದರು.

‘ತುರ್ತು ಚಿಕಿತ್ಸೆಗಳಿಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆ ಕಡ್ಡಾಯ ಮಾಡಿಲ್ಲ. ಏಕೆಂದರೆ ವರದಿ ಬರುವುದು ತಡವಾಗುತ್ತದೆ. ಅಷ್ಟರಲ್ಲಿ ರೋಗಿ ಆರೋಗ್ಯ ಹದಗೆಟ್ಟಿರುತ್ತದೆ. ಕೋವಿಡ್‌ ಮತ್ತು ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ತುರ್ತು ಅಲ್ಲದೆ ಇರುವುದನ್ನು ಮುಂದೂಡಲಾಗುತ್ತಿದೆ. ಮೂಳೆ, ಹೃದಯ ಸಂಬಂಧಿ, ಸಿಜೆರಿಯನ್‌ ಶಸ್ತಚಿಕಿತ್ಸೆ ನಡೆಸಲಾಗುತ್ತಿದೆ’ ಎಂದು ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ.ಬಷೀರ್‌ ತಿಳಿಸಿದರು.

ಆರೋಗ್ಯ ಸಮಸ್ಯೆಗೆ ಸಹಾಯವಾಣಿ

ಆರೋಗ್ಯ ಸಮಸ್ಯೆಗಳನ್ನು ಮುಕ್ತವಾಗಿ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅನುಕೂಲವಾಗಲೆಂದುರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಉಚಿತಸಹಾಯವಾಣಿ ಸಂಖ್ಯೆ 08172-296663 ಆರಂಭಿಸಿದ್ದು, ಬೆಳಿಗ್ಗೆ 10 ರಿಂದ ಸಂಜೆ 5ರವೆಗೆ ಸಂಪರ್ಕಿಸಬಹುದು.

‘ಸೌಖ್ಯವಾಣಿ’ ನಿಮ್ಮ ಆರೋಗ್ಯಕ್ಕೊಂದು ನಮ್ಮ ಸಹಾಯವಾಣಿಗೆ ಯಾವುದೇ ವಿಧವಾದ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಆಪ್ತ ಸಮಾಲೋಚನೆಗೆ ಸಹಾಯವಾಣಿಗೆ ಕರೆ ಮಾಡಬಹುದು.

‘ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಮುಕ್ತವಾಗಿ ದೂರವಾಣಿ ಮೂಲಕ ಸಹಾಯವಾಣಿ ಸಂಪರ್ಕಿಸಿ ತಜ್ಞ ವೈದ್ಯರಿಂದ ಸಲಹೆ ಪಡೆದುಕೊಳ್ಳಬಹುದು. ಕೋವಿಡ್ ಸಮಯದಲ್ಲಿ ಆರೋಗ್ಯ ರಕ್ಷಣೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗೆ, ಕೋವಿಡ್ ನಂತರದ ಆರೋಗ್ಯ ಉಪಚಾರ ಕುರಿತ ಮಾಹಿತಿಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು. ಮನೆಯ ಸುತ್ತ ಮುತ್ತಲ ಪರಿಸರದಲ್ಲಿ ಲಭ್ಯವಿರುವ ಗಿಡ ಮೂಲಿಕೆಗಳು ಮತ್ತು ಅಡುಗೆ ಪದಾರ್ಥಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳುವ ಬಗ್ಗೆ ವೈದ್ಯರು ಮಾಹಿತಿ ನೀಡುವರು’ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ.ಎಸ್.ಎ.ನಿತಿನ್ ತಿಳಿಸಿದ್ದಾರೆ.

ಅನ್ಯ ಚಿಕಿತ್ಸೆಗೆ 300 ಹಾಸಿಗೆ ಮೀಸಲು

ಸರ್ಕಾರದ ಆದೇಶದಂತೆ ಹಿಮ್ಸ್‌ನಲ್ಲಿ ಕೋವಿಡ್‌ ರೋಗಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕೋವಿಡೇತರರೋಗಿಗಳಿಗೆ 300 ಹಾಸಿಗೆ ಮೀಸಲಿರಿಸಲಾಗಿದೆ. ಅಪಘಾತ, ತಲೆಗೆ ಪೆಟ್ಟು, ವಿಷ ಸೇವನೆಯಂಥ ಪ್ರಕರಣಗಳಲ್ಲಿರೋಗಿಯನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಹೆಚ್ಚುತ್ತಿರುವುದರಿಂದ ಅನ್ಯ ರೋಗಗಳ ಚಿಕಿತ್ಸೆಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ. ಕೆಲವರಿಗೆ ಕೈ, ಕಾಲಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಅಂಥವರು ಅವಶ್ಯಕತೆ ಇಲ್ಲದಿದ್ದರೂ ಆಸ್ಪತ್ರೆಯಲ್ಲಿ ದಾಖಲಾಗಿ ವಿಶೇಷ ಚಿಕಿತ್ಸೆ ನೀಡುವಂತೆ ಪಟ್ಟು ಹಿಡಿಯುತ್ತಾರೆ.ರೋಗಿಯ ಆರೋಗ್ಯ ಸ್ಥಿತಿ ನೋಡಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT