ಶನಿವಾರ, ಏಪ್ರಿಲ್ 1, 2023
29 °C

ಮಹಿಳೆಯರಿಂದ ರಸ್ತೆಯಲ್ಲಿ ಮದ್ಯ ಸುರಿದು ಬೆಂಕಿ ಹಚ್ಚಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಅಕ್ರಮ ಮದ್ಯ ಮಾರಾಟ ತಡೆಯಲು ದೂರು ನೀಡಿದರೂ, ಪ್ರಯೋಜನವಾಗದ್ದರಿಂದ ಸಿಟ್ಟಿಗೆದ್ದ ಮಹಿಳೆಯರು, ಗ್ರಾಮಕ್ಕೆ ಪೂರೈಕೆ ಮಾಡಲು ತರುತ್ತಿದ್ದ ಸುಮಾರು ₹ 80 ಸಾವಿರ ಮೌಲ್ಯದ ಮದ್ಯವನ್ನು ಭಾನುವಾರ ರಸ್ತೆಗೆ ಸುರಿದು, ಬೆಂಕಿ ಹಚ್ಚಿದ್ದಾರೆ.

ಹೊಳೆನರಸೀಪುರ ತಾಲ್ಲೂಕು ಹಳೇಕೋಟೆ ಹೋಬಳಿಯ ಮಳಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಸುಮಾರು 500 ಮನೆಗಳಿದ್ದು, 2 ಸಾವಿರ ಜನಸಂಖ್ಯೆ ಇದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಗೌಡೇಗೌಡ ಅವರು ಪಂಚಾಯಿತಿ ಮಾಡಿ, ಅಕ್ರಮವಾಗಿ ಮದ್ಯ ಮಾರಿದರೆ ₹ 10 ಸಾವಿರ ದಂಡ ವಿಧಿಸಲಾಗುವುದು ಎಂದು ನಿರ್ಣಯ ಮಾಡಿದ್ದರು. ಹೀಗಾಗಿ, ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿರಲಿಲ್ಲ. ಆದರೆ, ಅವರ ನಿಧನ ನಂತರ ಗ್ರಾಮದ 30ರಿಂದ 40 ಮನೆಗಳಲ್ಲಿ ನಾಲ್ಕು ತಿಂಗಳಿನಿಂದ  ಮದ್ಯ ಮಾರಾಟ ಮಾಡುತ್ತಿದ್ದರು.

ಭಾನುವಾರ ಮತ್ತು ಮಂಗಳವಾರ ಇಲ್ಲಿನ ಶಕ್ತಿದೇವತೆ ಲಕ್ಷ್ಮೀದೇವಿ ದೇವಾಲಯಕ್ಕೆ ವಿವಿಧೆಡೆಯಿಂದ ಹೆಚ್ಚು ಜನರು ಬರುತ್ತಿದ್ದುದರಿಂದ ಇದನ್ನೇ ಲಾಭ ಮಾಡಿಕೊಂಡ ಕೆಲವರು ರಸ್ತೆ ಬದಿಯಲ್ಲೇ ಮದ್ಯ ಮಾರಾಟಕ್ಕೆ ಮುಂದಾಗಿದ್ದರು. ಕೆಲವರು ಮನೆಯಲ್ಲಿದ್ದ ಧಾನ್ಯ, ಇತರೆ ವಸ್ತುಗಳನ್ನು ಮಾರಾಟ ಮಾಡಿ ಮದ್ಯ ಸೇವಿಸುತ್ತಿದ್ದರು.

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲೇಬೇಕೆಂದು ಭಾನುವಾರ ಪಂಚಾಯಿತಿ ಕರೆಯಲಾಗಿತ್ತು. ಇದೇ ವೇಳೆ ವ್ಯಕ್ತಿಯೊಬ್ಬ ಗ್ರಾಮಕ್ಕೆ ಕದ್ದು ಮದ್ಯ ಪೂರೈಕೆ ಮಾಡುತ್ತಿದ್ದ. ಮಹಿಳೆಯರು ತಡೆಯಲು ಹೋದಾಗ ಮದ್ಯ ಬಿಟ್ಟು ಆತ ಅಲ್ಲಿಂದ ಪರಾರಿಯಾದ. ಕೂಡಲೇ ಅಷ್ಟೂ ಮದ್ಯದ ಪೊಟ್ಟಣಗಳನ್ನು ರಸ್ತೆಗೆ ಸುರಿದು ನಾಶಪಡಿಸಿದರು.

₹ 50 ಸಾವಿರ ದಂಡ

ಪಂಚಾಯಿತಿಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ರಾಮದಲ್ಲಿ ಯಾರಾದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ ₹ 50 ಸಾವಿರ ದಂಡ ವಿಧಿಸಲಾಗುತ್ತದೆ. ಜತೆಗೆ ಅಂಥವರ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರೆ ಯಾರೂ ಹೋಗಕೂಡದು ಎಂಬ ನಿರ್ಣಯಕೈಗೊಳ್ಳಲಾಗಿದೆ. ಈ ಸಂಬಂಧ ಆಣೆ, ಪ್ರಮಾಣವನ್ನೂ ಮಾಡಿಸಿಕೊಳ್ಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು