ಸಕಲೇಶಪುರ: ‘ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆ ಪ್ರಮಾಣ ಹೆಚ್ಚಾಗುತ್ತಿದ್ದು, ಪೋಷಕರು ದುಡಿಮೆಗೆ ಎಷ್ಟು ಶ್ರಮ ಹಾಕುತ್ತೀರಿ, ಅದಕ್ಕಿಂತ ಹೆಚ್ಚು ಗಮನವನ್ನು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೂ ಹರಿಸುವುದು ಅಗತ್ಯವಾಗಿದೆ’ ಎಂದು ಇಲ್ಲಿಯ ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್ ಹೇಳಿದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ‘ಅಮಲು ಮುಕ್ತ ಭಾರತ’ ವಿಷಯದ ಬಗ್ಗೆ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
‘ಅಬಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ, ಶಿಕ್ಷಣ ಅರಣ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಪತ್ರಕರ್ತರು, ವಿವಿಧ ಸಂಘ ಸಂಸ್ಥೆಗಳು ಸೇರಿ ಯುದ್ಧೋಪಾದಿಯಲ್ಲಿ ನಿರಂತರವಾಗಿ ಕೆಲಸ ಮಾಡಿದರೆ, ಡ್ರಗ್ಸ್ ಮಹಾಮಾರಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಕ್ಕೆ ಸಾಧ್ಯವಿದೆ’ ಎಂದರು.
‘ಮನೆಯಲ್ಲಿ ಮಾತ್ರ ಡ್ರಗ್ಸ್‌ನಂತಹ ಮಾರಕ ಚಟುವಟಿಕೆಗಳಿಂದ ಒಬ್ಬ ವ್ಯಕ್ತಿ ಹಾಳಾಗುವುದಲ್ಲ, ಆತನ ಕುಟುಂಬ ಮತ್ತು ಇಡೀ ಸಮಾಜವೇ ಹಾಳಾಗುತ್ತದೆ. ಹಾಗಾಗಿ ಇದನ್ನು ನಿಯಂತ್ರಸಲು ಜಾಗೃತಿ ಮೂಡಬೇಕಾದರೆ ಪ್ರತಿಯೊಬ್ಬರ ಜವಾಬ್ದಾರಿಯೂ ಕೂಡ ಬಹಳ ಮುಖ್ಯ’ ಎಂದು ಹೇಳಿದರು.
‘ಡ್ರಗ್ಸ್ ಮಾರಾಟ ಮಾಡುವವರ ಮತ್ತು ಅದನ್ನು ಉಪಯೋಗಿಸುವವರ ಮಾಹಿತಿ ಗೊತ್ತಿದ್ದೂ ಕೂಡ ನಾನೇಕೆ ಮಾಹಿತಿ ನೀಡಬೇಕು, ಮಾಹಿತಿ ನೀಡಿದರೆ ನಾನೂ ಕೂಡ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಮೌನ ವಹಿಸುವುದೂ ಕೂಡ ಸಾಮಾಜಿಕ ಅಪರಾಧವಾಗುತ್ತದೆ. ಮಾಹಿತಿ ಗೊತ್ತಿರುವವರು ಯಾವುದೇ ಭಯವಿಲ್ಲದೆ ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸಿದಾಗ ನಿಯಂತ್ರಣ ಮಾಡಲು ಅನುಕೂಲವಾಗುತ್ತದೆ’ ಎಂದರು.
‘ಡ್ರಗ್ಸ್ ಮಾಫಿಯಾ ಇದೆ. ಡ್ರಗ್ಸ್‌ಗೆ ಯುವಕರು ಹೆಚ್ಚು ದಾಸರಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಲವರು ಮಾತನಾಡುತ್ತಾರೆ ಎಂಬುದು ಗೊತ್ತಿದೆ. ಮನೆಯಲ್ಲಿ ಯಾರಾದರೂ ಒಬ್ಬರು ಡ್ರಗ್ಸ್ ಹಾಗೂ ಇನ್ನಿತರ ಅಮಲು ಯುಕ್ತ ಸೇವನೆಗೆ ಒಳಗಾಗಿದ್ದರೆ, ಅವರ ಮನೆಯವರಿಗೆ, ಪಕ್ಕದ ಮನೆಯವರಿಗೆ, ಅವರ ಸ್ನೇಹಿತರಿಗೆ ಗೊತ್ತಿರುತ್ತದೆ. ಅವರು ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.
‘ಜೊತೆಗೆ ಅವನಿಗೆ ಡ್ರಗ್ಸ್ ಯಾರು ಸರಬರಾಜು ಮಾಡುತ್ತಾರೆ ಎಂಬುದನ್ನು ಮನೆಯವರು, ಆತನ ಸಂಬಂಧಿಗಳು ಸ್ನೇಹಿತರೇ ಸುಲಭವಾಗಿ ಪತ್ತೆ ಹಚ್ಚಬಹುದು. ಆದರೆ ಆ ಕೆಲಸವನ್ನು ಏಕೆ ಯಾರೂ ಮಾಡುತ್ತಿಲ್ಲ. ವಿಷಯ ಗೊತ್ತಿದ್ದರೂ ಮುಚ್ಚಿಡುತ್ತಾ ಹೋದಂತೆಲ್ಲಾ ಅವರ ಮನೆ ಹಾಳಾಗುವುದಿಲ್ಲವೇ. ಈ ವಿಚಾರವನ್ನು ಪ್ರತಿಯೊಬ್ಬರೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಖಚಿತ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿ ವ್ಯವಸ್ಥೆ ಸರಿಪಡಿಸಬೇಕಾದ ಜವಾಬ್ದಾರಿ ಎಲ್ಲರ ಮೇಲೂ ಇದೆ’ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.