ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದಲ್ಲಿ ಗರಿಗೆದರಿಗೆ ಅಧಿಕಾರ ಚರ್ಚೆ: ಪ್ರೀತಂಗೆ ಒಲಿಯುವುದೇ ಸಚಿವ ಸ್ಥಾನ?

ಕಮಲ ಪಾಳೆಯದಲ್ಲಿ ಶುರುವಾಯಿತು ಅಧಿಕಾರದ ಲೆಕ್ಕಚಾರ
Last Updated 28 ಜುಲೈ 2019, 5:23 IST
ಅಕ್ಷರ ಗಾತ್ರ

ಹಾಸನ: ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಜಿಲ್ಲೆಯಲ್ಲಿ ಅಧಿಕಾರ ಲೆಕ್ಕಾಚಾರ ಆರಂಭಗೊಂಡಿದ್ದು, ಬಿಜೆಪಿಯ ಏಕೈಕ ಶಾಸಕ ಪ್ರೀತಂಗೌಡಗೆ ಸಚಿವ ಸ್ಥಾನ ಸಿಗಲಿದಯೇ ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ. ‌

2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆಗೇರಿದಾಗ ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ಕಮಲ ಶಾಸಕರಿರಲಿಲ್ಲ. ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಜೆಡಿಎಸ್‌, ಎರಡರಲ್ಲಿ ಕಾಂಗ್ರೆಸ್‌ ಶಾಸಕರಿದ್ದರು. ಆಗ ಯಾರಿಗೂ ಸಚಿವ ಸ್ಥಾನ ದೊರೆಯಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಅರವಿಂದ ಲಿಂಬಾವಳಿ, ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ ಅವರು ಕೆಲ ತಿಂಗಳು ಕಾರ್ಯ ನಿರ್ವಹಿಸಿದ್ದರು.

ಈ ಬಾರಿ ಹಾಸನ ಕ್ಷೇತ್ರದಿಂದ ಆಯ್ಕೆಯಾಗಿರುವ ಜಿಲ್ಲೆಯ ಏಕೈಕ ಶಾಸಕ ಪ್ರೀತಂ ಗೌಡ ಅವರಿಗೆ ಜಿಲ್ಲಾವಾರು ಪ್ರಾತಿನಿಧ್ಯ ಪರಿಗಣಿಸಿದರೆ, ಸಚಿವ ಸ್ಥಾನ ಸಿಗಬಹುದು ಎಂಬ ಆಶಾಭಾವ ಮೂಡಿದೆ. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಜತೆಗೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರು ಬೆನ್ನಿಗೆ ನಿಂತರೆ ಸಚಿವ ಸ್ಥಾನ ಸಿಕ್ಕಿದರೂ ಅಚ್ಚರಿ ಪಡುವಂತಿಲ್ಲ.

ಆದರೆ, ರಾಜಕೀಯ ಮೇಲಾಟದಲ್ಲಿ ಮೈತ್ರಿ ಸರ್ಕಾರ ಪತನಗೊಳಿಸಲು ರಾಜೀನಾಮೆ ಸಲ್ಲಿಸಿ ಸಹಕರಿಸಿರುವ ಜೆಡಿಎಸ್‌, ಕಾಂಗ್ರೆಸ್‌ ಶಾಸಕರಿಗೆ ಸಚಿವ ಸ್ಥಾನ ನೀಡುವ ಪರಿಸ್ಥಿತಿ ಬಂದರೆ, ಮೂಲ ಬಿಜೆಪಿ ಶಾಸಕರು ಅಧಿಕಾರ ತ್ಯಾಗ ಮಾಡಲು ಸಿದ್ಧರಿರಬೇಕಾಗುತ್ತದೆ. ಆ ಪಟ್ಟಿಗೆ ಪ್ರೀತಂ ಹೆಸರು ಸೇರ್ಪಡೆಯಾ ಗಬಹುದು ಎಂಬ ಆತಂಕವೂ ಇದೆ.

ಆಗ, ಅನಿವಾರ್ಯವಾಗಿ ಮತ್ತೊಮ್ಮೆ ಅನ್ಯ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವ ಸಂಪ್ರದಾಯ ಮುಂದುವರೆಯಬಹುದು.

ಬಲ ಕಳೆದುಕೊಂಡಿದ್ದ ಬಿಜೆಪಿ, ಉತ್ತಮ ಸಂಘಟನೆ ಮೂಲಕ 2018ರ ಹಾಸನ ಮತ್ತು ಸಕಲೇಶಪುರ ವಿಧಾನ ಸಭಾ ಕ್ಷೇತ್ರಗಳಲ್ಲಿ ಚೇತರಿಕೆ ಕಂಡಿತ್ತಲ್ಲದೆ, ಹಾಸನ ಕ್ಷೇತ್ರವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಸಕಲೇಶಪುರ ಕ್ಷೇತ್ರವನ್ನು ಅಲ್ಪ ಮತಗಳ ಅಂತರದಿಂದ ಕಳೆದುಕೊಂಡಿತು.

ಜಿಲ್ಲಾ ಕೇಂದ್ರ ಹಾಸನದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಿ, ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಅಲ್ಪ ಮಟ್ಟಿನ ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾಗಿತ್ತು. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ ಬಿಜೆಪಿ ಸಾಕಷ್ಟು ಚೇತರಿಕೆ ಕಂಡಿತು.

ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹೊಸ ಹುರುಪು ಕಾಣಿಸಿಕೊಂಡಿದೆ.

ಎಂಎಲ್‌ಸಿಗೆ ಮಂಜು ಬೇಡಿಕೆ

ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ತ್ಯಜಿಸಿ ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಮಂಜು ಅವರು ಐದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಜಿಲ್ಲೆಯ ಇತಿಹಾಸದಲ್ಲೇ ಹೆಚ್ಚು ಮತಗಳು ಬಿಜೆಪಿಗೆ ಬರುವುದಕ್ಕೆ ತನ್ನ ವೈಯಕ್ತಿಕ ವರ್ಚಸ್ಸು ಕಾರಣ ಎಂದು ಹೇಳಿದ್ದರು. ಹಾಗಾಗಿ ವಿಧಾನ ಪರಿಷತ್‌ ಸದಸ್ಯರಾಗಿ ಮಾಡುವ ಮೂಲಕ ಸಚಿವ ಸ್ಥಾನ ನೀಡುವಂತೆ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿದೆ.

***

ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ. ಆದರೆ ಸಚಿವ ಸ್ಥಾನ ನೀಡುವಂತೆ ಯಾವುದೇ ಒತ್ತಡ ಹೇರುವುದಿಲ್ಲ.

–ಪ್ರೀತಂ ಗೌಡ, ಬಿಜೆಪಿ ಶಾಸಕ

ಏಕೈಕ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು. ಈ ಸಂಬಂಧ ನಿಯೋಗ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಲಿದೆ.

–ನವಿಲೆ ಅಣ್ಣಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಸಚಿವ ಸ್ಥಾನದ ಆಕಾಂಕ್ಷಿಯೋ, ಅಲ್ಲವೋ ಎಂಬುದರ ಬಗ್ಗೆ ಏನು ಹೇಳುವುದಿಲ್ಲ. ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ.

–ಎ.ಮಂಜು, ಬಿಜೆಪಿ ಹಿರಿಯ ಮುಖಂಡ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT