ಭಾನುವಾರ, ಏಪ್ರಿಲ್ 18, 2021
24 °C
ಮತದಾರರ ಸೆಳೆಯಲು ಉಡುಗೊರೆಗಳ ಮಹಾಪೂರ

ಹಾಸನ: ಮನೆಗೆ ಕೋಳಿ, ದಿನಸಿ ಕಿಟ್

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

ಕೋಳಿ–ಸಾಂದರ್ಭಿಕ ಚಿತ್ರ

ಹಾಸನ: ಗ್ರಾಮ ಪಂಚಾಯಿತಿ ಅಖಾಡ ರಂಗೇರುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಮತದಾರರನ್ನು ಸೆಳೆಯಲು ಕಸರತ್ತು ಆರಂಭವಾಗಿದೆ. ಹಲವಾರು ಆಮಿಷಗಳನ್ನು ಒಡ್ಡಲಾಗುತ್ತಿದೆ.

ಹೋಟೆಲ್‌, ಡಾಬಾ, ಬಾರ್‌, ರೆಸ್ಟೋರೆಂಟ್‌ಗಳಿಗೆ ಶುಕ್ರದೆಸೆ ಶುರುವಾಗಿದೆ. ಮತದಾರರಿಗೆ ಕೇವಲ ಬಾಡೂಟ ಅಲ್ಲ, ಕೋಳಿ, ಮಾಂಸ, ಮದ್ಯ, ಆಹಾರ ಪದಾರ್ಥಗಳ ಕಿಟ್‌ ಸಹ ಪೂರೈಕೆ ಮಾಡಲಾಗುತ್ತಿದೆ.

ಚನ್ನರಾಯಪಟ್ಟಣ ಸುತ್ತಮುತ್ತಲ ಹಳ್ಳಿಗಳು ಹಾಗೂ ಹಿರೀಸಾವೆ ಹೋಬಳಿಯ ಹಲವು ಗ್ರಾಮಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಕೋಳಿ ಪೂರೈಕೆ ಮಾಡುತ್ತಿದ್ದಾರೆ. ಕುಟುಂಬದಲ್ಲಿರುವ ಮತಗಳ ಸಂಖ್ಯೆಗೆ ಅನುಗುಣವಾಗಿ ಒಂದೂವರೆ ಕೆ.ಜಿ. ಯಿಂದ ಮೂರು ಕೆ.ಜಿ. ಕೋಳಿ ನೀಡಲಾಗುತ್ತಿದೆ. ಮತ್ತೆ ಕೆಲವರು ಕೋಳಿ ಜತೆ ಮದ್ಯ ಸಹ ಹಂಚುತ್ತಿದ್ದಾರೆ.

ಈ ಭಾಗದ ಜನರು ಕಬ್ಬಳ್ಳಿ ಬಸವೇಶ್ವರ ದೇವಸ್ಥಾನ, ಬೆಳಗೀಹಳ್ಳಿ ನರಸಿಂಹ ಸ್ವಾಮಿ, ಸಾಸಲು ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಒಂದು ತಿಂಗಳು ಮಾಂಸಾಹಾರ ತ್ಯಜಿಸಿದ್ದರು. ಕಡೇ ಕಾರ್ತೀಕ ಸೋಮವಾರ ಮುಗಿದ ಬಳಿಕ ಕೋಳಿ ಪೂರೈಕೆ ಜೋರಾಗಿದೆ.

ಯುವಕರ ಗುಂಪು ತೋಟದ ಮನೆಗಳಲ್ಲಿ ಮದ್ಯ, ಮಾಂಸದ ಪಾರ್ಟಿ ಆಯೋಜನೆ ಮಾಡುತ್ತಿದೆ. ಮತಗಳು ಕೈತಪ್ಪಿ ಹೋಗಬಹುದು ಎಂಬ ಆತಂಕಕ್ಕೆ ಬಿದ್ದ ಕೆಲ ಅಭ್ಯರ್ಥಿಗಳು ಅನಾರೋಗ್ಯ ಪೀಡಿತರ ವೈದ್ಯಕೀಯ ಚಿಕಿತ್ಸೆಗೂ ಆರ್ಥಿಕ ನೆರವು ನೀಡುತ್ತಿದ್ದಾರೆ.

ನುಗ್ಗೇಹಳ್ಳಿ ಗ್ರಾಮದಲ್ಲಿ ಗುರುವಾರ, ಶುಕ್ರವಾರ ಮತದಾರರ ಮನೆಗಳಿಗೆ ಚಿಕನ್‌ ಬಿರಿಯಾನಿ ಪೊಟ್ಟಣದ ಜತೆಗೆ ಒಂದೂವರೆ ಕೆ.ಜಿ. ಕೋಳಿ ಮಾಂಸವನ್ನು ಸಹ ನೀಡಲಾಗಿದೆ. ಬಾಗೂರು ಗ್ರಾಮದಲ್ಲಿ ಮನೆಗಳಿಗೆ ಕೋಳಿ ತಲುಪಿಸಲಾಗುತ್ತಿದೆ.

ಶ್ರವಣಬೆಳಗೊಳ ಹೋಬಳಿಯ ಹಿರಿಬಿಳ್ತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಕ್ಕಿ ಮತ್ತು ಸಾಂಬಾರ ಪದಾರ್ಥಗಳ ಕಿಟ್‌ ವಿತರಿಸಲಾಗುತ್ತಿದೆ. ಮಹಿಳೆಯರಿಗೆ ಪೆಪ್ಸಿ, ಕೊಕಾ ಕೋಲಾ, ಹಣ್ಣಿನ ಜ್ಯೂಸ್ ಪ್ಯಾಕೇಟ್‌ ನೀಡಲಾಗುತ್ತಿದೆ.

ಮಲೆನಾಡು ಪ್ರದೇಶ ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಮದ್ಯ ಪೂರೈಸಲಾಗುತ್ತಿದೆ. ಕೆಲವು ಅಭ್ಯರ್ಥಿಗಳು ಟೋಕನ್‌ ನೀಡುತ್ತಿದ್ದು, ಮದ್ಯಪ್ರಿಯರು ಸಮೀಪದ ಬಾರ್‌ಗಳಿಗೆ ಹೋಗಿ ಟೋಕನ್‌ ನೀಡಿ ಮದ್ಯ ಪಡೆಯಬೇಕಾಗಿದೆ.

ಹೊಳೆನರಸೀಪುರ ತಾಲ್ಲೂಕಿನಲ್ಲಿ ಮತದಾರರಿಗೆ ಬಾಡೂಟದ ಕೂಪನ್‌ ನೀಡಲಾಗುತ್ತಿದೆ. ಕೂಪನ್‌ ತೋರಿಸಿ ಹೋಟೆಲ್‌, ಡಾಬಾದಲ್ಲಿ ಊಟ ಮಾಡಬಹುದು. ಹಾಸನ ತಾಲ್ಲೂಕಿನ ಶಾಂತಿಗ್ರಾಮದನಲ್ಲಿ ಕುಕ್ಕರ್‌  ನೀಡಲಾಗುತ್ತಿದೆ.

ಗ್ರಾಮೀಣ ಭಾಗದ ಬಹುತೇಕರು ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ತೆರಳುವುದರಿಂದ ಅಭ್ಯರ್ಥಿಗಳು ರಾತ್ರಿ ವೇಳೆ
ಮತದಾರರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಮತದಾನಕ್ಕೆ ಕೊನೆ ಎರಡು ದಿನ ಇರುವಾಗ ಹಲವು ಕಡೆ ಹಣ, ಮದ್ಯ, ಉಡುಗೊರೆಗಳನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು