ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ: ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಕೃತ್ಯ ಮರೆಮಾಚಲು ಕಾಂಗ್ರೆಸ್‌ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ಆರೋಪ
Published 9 ಮೇ 2024, 13:15 IST
Last Updated 9 ಮೇ 2024, 13:15 IST
ಅಕ್ಷರ ಗಾತ್ರ

ಹಾಸನ: ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ವಕೀಲ ದೇವರಾಜೇಗೌಡ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹೊರಟ ಕಾರ್ಯಕರ್ತರು ಹಾಗೂ ಮುಖಂಡರು, ಪ್ರಜ್ವಲ್ ರೇವಣ್ಣ, ಎಚ್.ಡಿ. ಕುಮಾರಸ್ವಾಮಿ ಹಾಗೂ ದೇವರಾಜೇಗೌಡ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ತೆರಳಿ ಕೆಲಕಾಲ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಆರೋಪಿಯಾಗಿದ್ದು, ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್ ನೀಡಿ ಅವರನ್ನು ವಿದೇಶಕ್ಕೆ ಪರಾರಿಯಾಗಲು ಸಹಕಾರ ನೀಡಿದವರು ಯಾರು? ಇದೀಗ ಅವರ ಬಂಧನ ಮಾಡಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಮ್ಮ ಅಣ್ಣನ ಮಗ ತಪ್ಪಿಸಿಕೊಂಡಿದ್ದು ಗೊತ್ತಿಲ್ಲ, ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ ಎಂದರೆ ಹೇಗೆ? ಪ್ರಜ್ವಲ್ ರೇವಣ್ಣ ಅವರ ಕೃತ್ಯವನ್ನು ಮರೆಮಾಚಲು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

ಪೆನ್ ಡ್ರೈವ್ ಪ್ರಕರಣದಿಂದ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಹಾನಿಯಾಗಿದ್ದು, ಇದನ್ನು ಮರೆಮಾಚಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ನನ್ನ ಮಗನಿದ್ದಂತೆ ತಪ್ಪು ಮಾಡಿದ್ದಾನೆ ಕ್ಷಮಿಸಿ ಎಂದು ಹೇಳಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.

ನಂತರ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದ್ದರು. ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಜನರಲ್ಲಿಯೇ ಗೊಂದಲ ಮೂಡಿಸುತ್ತಿರುವ ಕುಮಾರಸ್ವಾಮಿ ಇದೀಗ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಮುಖಂಡ ದೇವರಾಜೇಗೌಡ ಪೆನ್ ಡ್ರೈವ್ ಇದೆ ಎಂದು ಆರು ತಿಂಗಳ ಹಿಂದೆಯೇ ಹೇಳಿಕೆ ನೀಡಿದ್ದರು. ಇದೀಗ ಪೆನ್ ಡ್ರೈವ್ ಹಾಗೂ ಸಾಮಾಜಿಕ ಜಾಲಗಳ ಮೂಲಕ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿದ್ದು, ದೇವರಾಜೇಗೌಡ ಅವರ ಮಂಪರು ಪರೀಕ್ಷೆ ಮಾಡಿದರೆ, ಯಾರೂ ಪೆನ್ ಡ್ರೈವ್ ಅನ್ನು ಹಂಚಿದವರು ಯಾರು ಎಂಬುದು ತಿಳಿಯುತ್ತದೆ ಎಂದರು.

ಬಿಜೆಪಿಯವರು ಯೋಗ್ಯತೆ, ಮಾನವೀಯತೆ ಇದ್ದರೆ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಬೇಕು. ಎಚ್.ಡಿ. ಕುಮಾರಸ್ವಾಮಿ ರಾಜಕೀಯಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ರಾಜಕೀಯ ಕ್ಷೇತ್ರ ಕಲುಷಿತವಾಗಿದೆ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಮಹೇಶ್, ರಂಜಿತ್ ಗೊರೂರು, ಮಲ್ಲಿಗೆವಾಳು ದೇವಪ್ಪ ಇತರರು ಇದ್ದರು.

‘ಪ್ರಜ್ವಲ್‌ ದೇವರಾಜೇಗೌಡ ಬಂಧಿಸಿ’

ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕು. ಪ್ರಮುಖವಾಗಿ ಪೆನ್ ಡ್ರೈವ್ ಹಂಚಿರುವ ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ತಾರಾ ಚಂದನ್ ಒತ್ತಾಯಿಸಿದರು. ವಕೀಲ ದೇವರಾಜೇಗೌಡ ಪೆನ್ ಡ್ರೈವ್ ತಮ್ಮ ಬಳಿ ಇದೆ ಎಂದು ಮೊದಲ ಬಾರಿಗೆ ಹೇಳಿದ್ದರು. ಅವರ ವಿರುದ್ಧ ತನಿಖೆ ಕೈಗೊಂಡು ಕೂಡಲೇ ಬಂಧಿಸಿದರೆ ಸತ್ಯಾಸತ್ಯತೆ ಹೊರಬರಲಿದೆ. ಈ ನಿಟ್ಟಿನಲ್ಲಿ ಎಸ್ಐಟಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT