ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ ಅಂತ್ಯಕ್ಕೆ ₹20 ಕೋಟಿ ಲಾಭ ನಿರೀಕ್ಷೆ

ಲಾಕ್‌ಡೌನ್‌ನಿಂದಾಗಿ ಹಾಮೂಲ್‌ಗೆ ₹50 ಕೋಟಿ ನಷ್ಟ: ರೇವಣ್ಣ
Last Updated 18 ಜನವರಿ 2021, 13:45 IST
ಅಕ್ಷರ ಗಾತ್ರ

ಹಾಸನ: ಮಾರ್ಚ್ ಅಂತ್ಯದ ವೇಳೆಗೆ ಹಾಸನ ಹಾಲು ಒಕ್ಕೂಟ (ಹಾಮೂಲ್‌)ವು ಅಂದಾಜು ₹20 ಕೋಟಿ
ಲಾಭ ಗಳಿಸುವ ನಿರೀಕ್ಷೆ ಇದ್ದು, ಇದರಲ್ಲಿ ಸುಮಾರು ₹15 ಕೋಟಿ ಹಾಲು ಉತ್ಪಾದಕರಿಗೆ ನೀಡಲಾಗುವುದು
ಎಂದು ಒಕ್ಕೂಟದ ಅಧ್ಯಕ್ಷ ಎಚ್‌.ಡಿ. ರೇವಣ್ಣ ಹೇಳಿದರು.

ಕೋವಿಡ್‌ ಕಾರಣದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಮತ್ತು ಮಾರುಕಟ್ಟೆ ದರ ಕುಸಿತದಿಂದಾಗಿ
ಸೆಪ್ಟೆಂಬರ್‌ ಅಂತ್ಯಕ್ಕೆ ಅಂದಾಜು ₹50 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು. ನಂತರ ಚೇತರಿಕೆ
ಕಂಡ ಪರಿಣಾಮ ಲಾಭದಲ್ಲಿ ಮುನ್ನಡೆಯುತ್ತಿದೆ. ಸದ್ಯ ಬ್ಯಾಂಕ್‌ನಲ್ಲಿ ₹ 39 ಕೋಟಿ ಠೇವಣಿ ಇರಿಸಲಾಗಿದೆ ಎಂದು
ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಲು ಉತ್ಪಾದಕರಿಗೆ ಖರೀದಿ ದರವನ್ನು ಲೀಟರ್‌ಗೆ₹ 23 .75 ನಿಂದ ₹24.75 ಕ್ಕೆ ಏರಿಕೆ
ಮಾಡಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಮೂರು ಸಾವಿರ ಟನ್‌ ಬೆಣ್ಣೆ ಸೇರಿ ₹120 ಕೋಟಿ ಪದಾರ್ಥ ದಾಸ್ತಾನು ಇತ್ತು. ಇದರಿಂದ ಸಾಕಷ್ಟು ನಷ್ಟವಾಯಿತು. ಪ್ರಸ್ತುತ ಒಕ್ಕೂಟದ ವಹಿವಾಟು ₹1,500ಕೋಟಿ ತಲುಪಿದೆ ಎಂದರು.

ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಕಾಲೇಜುಗಳಿಗೆ ಈವರೆಗೂ ಸುಮಾರು 250
ಕಂಪ್ಯೂಟರ್‌ಗಳನ್ನು ನೀಡಲಾಗಿದೆ. ಪ್ರಸಕ್ತ ವರ್ಷ ಒಕ್ಕೂಟದ ಧಮಾರ್ಥ ನಿಧಿಯಿಂದ ₹ 40 ಲಕ್ಷ ವೆಚ್ಚದಲ್ಲಿ
100 ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೇ ಜಿಲ್ಲಾ ಸಹಕಾರ ಯೂನಿಯನ್‌ ನ ಸಹಕಾರ
ಶಿಕ್ಷಣ ನಿಧಿಗೆ ₹3,67,995 ನೀಡಲಾಗಿದೆ ಎಂದು ವಿವರಿಸಿದರು.

ಪ್ರಸಕ್ತ ವರ್ಷ 30 ಸಾವಿರ ರಾಸುಗಳನ್ನು ವಿಮೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದು, ಉತ್ಪಾದಕರು
ಪಾವತಿಸಬೇಕಾದ ವಿಮಾ ವಂತಿಗೆ ₹900 ಪೈಕಿ ₹ 600 ಸಹಾಯಧನ ಒಕ್ಕೂಟಭರಿಸಲಿದೆ ಎಂದರು.

ಹಾಸನ ಹಾಲು ಒಕ್ಕೂಟ ಮಂಡಳಿ ವತಿಯಿಂದ ₹ 250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ
ಯುಎಚ್‌ಟಿ ಪೆಟ್‌ ಬಾಟಲ್ ಘಟಕದ ಯಂತ್ರೋಪಕರಣಗಳ ಅಳವಡಿಕೆಗಾಗಿ ಇಟಲಿಯಿಂದತಜ್ಞರ
ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಮಾರ್ಚ್ ಅಂತ್ಯಕ್ಕೆ ಉತ್ಪಾದನೆ ಪ್ರಾರಂಭಿಸಲಿದೆ ಎಂದು ನುಡಿದರು.

ಕೈಗಾರಿಕಾ ಪ್ರದೇಶದ 54 ಎಕರೆ ಜಾಗದಲ್ಲಿ ಮೆಗಾ ಡೈರಿ ಸ್ಥಾಪನೆ ಸಂಬಂಧ ಟೆಂಡರ್‌ ಕರೆಯಲಾಗಿದೆ.
ಮೊದಲ ಹಂತದಲ್ಲಿ 10 ಲಕ್ಷ ಲೀಟರ್‌ನ ಮೆಗಾ ಡೈರಿ, ನಂತರ ಹೆಚ್ಚುವರಿ 5 ಲಕ್ಷ ಲೀಟರ್‌ಗೆ
ವಿಸ್ತರಿಸಲಾಗುವುದು. ದಿನಕ್ಕೆ ಏಳು ಲಕ್ಷ ಲೀಟರ್‌ ಹಾಲು ಪೌಡರ್‌ ಗೆ ಪರಿವರ್ತನೆ, 5 ಲಕ್ಷ ಲೀಟರ್‌ ಮಿಲ್ಕ್‌ ಪ್ಯಾಕೇಟ್‌,10, 20 ಗ್ರಾಂ ಬೆಣ್ಣೆ ತಯಾರಿಸಲಾಗುವುದು. ಮೆಗಾ ಡೈರಿಯ ಮಾದರಿ ಬಗ್ಗೆ ಈಗಾಗಲೇ ನಾಲ್ಕೈದು ಸಂಸ್ಥೆಗಳು ಪ್ರಾತ್ಯಕ್ಷಿಕೆ ತೋರಿಸಿವೆ ಎಂದು ವಿವರಿಸಿದರು.

ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT