ಮಂಗಳವಾರ, ಜೂನ್ 28, 2022
21 °C

ಮತಾಂತರ ನಿಷೇಧ ಕಾಯ್ದೆಗೆ ಅಂಕಿತ: ಪೇಜಾವರ ಶ್ರೀ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿರುವುದು ಸಂತಸ ತಂದಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಪಿಡುಗು ಮನೆ ಮನೆಗಳಲ್ಲಿ ದೊಡ್ಡ ಅವಾಂತರವನ್ನೇ ಎಬ್ಬಿಸುತ್ತಿತ್ತು. ಅನೇಕ ಮನೆಗಳಲ್ಲಿ ದಂಪತಿಯನ್ನೇ ಬೇರ್ಪಡಿಸುವ ಕೆಟ್ಟ ಕಾರ್ಯ ನಡೆಯುತ್ತಿತ್ತು. ಅಲ್ಲದೆ ಒಂದೇ ಮನೆಯೊಳಗೆ ಮಕ್ಕಳು ಬೇರೆ, ಅಪ್ಪ ಅಮ್ಮಂದಿರೇ ಬೇರೆ ಆಗಿ ಅವರ ಒಳಗೆ ವೈಮನಸ್ಸು ತರುವಂತಹ ಕಾರ್ಯ ನಡೆಯುತ್ತಿತ್ತು ಎಂದು ತಿಳಿಸಿದರು.

‌ಪಠ್ಯ ಪುಸ್ತಕಗಳಲ್ಲಿ ಹೊಸ ವಿಷಯ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, ‘ಕಾಲಕಾಲಕ್ಕೆ ಹೊಸ ವಿಚಾರಗಳನ್ನು ಸೇರ್ಪಡೆಗೊಳಿಸುವುದು ತಪ್ಪಲ್ಲ. ಭಗತ ಸಿಂಗ್ ವಿಚಾರವನ್ನು ತೆಗೆದು ಹಾಕಿಲ್ಲ, ಅದು ಬರಿ ವದಂತಿ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಇದ್ದಂತಹ ಯಾವುದೇ ಪಠ್ಯ ವಿಷಯಗಳನ್ನೂ ತೆಗೆದು ಹಾಕಿಲ್ಲ, ಹೊಸ ಭಾಗವನ್ನು ಸೇರ್ಪಡೆಗೊಳಿಸಿದ್ದೇವೆ ಎಂದು ಸಚಿವರೇ ಹೇಳಿದ್ದಾರೆ. ಹೀಗಿದ್ದರೂ, ಸುಖಾ ಸುಮ್ಮನೆ ಸಮಾಜದಲ್ಲಿ ಗುಲ್ಲು ಎಬ್ಬುಸುವಂತಹದ್ದು ಒಳ್ಳೆಯದಲ್ಲ’ ಎಂದು ನುಡಿದರು.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಹಾಗೂ ಶ್ರೀರಂಗಪಟ್ಟಣ ಮಸೀದಿ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದನ್ನು ಈಗಿನವರು ಯಾರೂ ಮಾಡಿದ್ದಲ್ಲ. ಹಿಂದಿನ ಕಾಲದಲ್ಲೇ ನಿರ್ಮಿಸಲಾಗಿದೆ. ಮಂದಿರ ಇದ್ದರೆ, ಶಿವಲಿಂಗ ದೊರೆತಿದ್ದರೆ ಇದರ ಬಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ಮಂದಿರ ಇದೆ ಎಂದು ತೀರ್ಪು ಬಂದರೆ ಅದನ್ನು ಒಪ್ಪಿಕೊಳ್ಳಬೇಕು’ ಎಂದು ಹೇಳಿದರು.

‘ತೀರ್ಪು ಸ್ವೀಕಾರ ಮಾಡಿ, ಆ ಸಮಾಜ ಅದನ್ನು ಬಿಟ್ಟುಕೊಡಬೇಕು. ಶ್ರೀರಂಗಪಟ್ಟಣ ಒಂದೇ ಅಲ್ಲ, ಎಲ್ಲಲ್ಲಿ ಇಂತಹದ್ದು ನಡೆದಿದೆ. ಯಾರದ್ದೋ ತಪ್ಪಿನಿಂದ ಆಗಿದೆ, ತಪ್ಪು ತಪ್ಪೇ, ಹಾಗಾಗಿ ಅದನ್ನು ಒಪ್ಪಿಕೊಳ್ಳಬೇಕು’ ಎಂದು ತಿಳಿಸಿದರು.

‘ಸಮಾಜದ ಸಾಮರಸ್ಯ ಕಾಪಾಡಬೇಕು. ಯಾವುದೇ ಮಂದಿರವನ್ನು ಖರೀದಿಸಿ ಮಾರ್ಪಾಡುಗೊಳಿಸಿದ್ದರೆ ಅದು ತಪ್ಪಲ್ಲ, ಆದರೆ, ಅತಿಕ್ರಮಣ ಮಾಡಿ ಮಾರ್ಪಾಡು ಮಾಡಿರುವುದನ್ನು ಒಪ್ಪುವಂತಹದ್ದಲ್ಲ. ಹಾಗಾಗಿ ಅದು ಬದಲಾಗಬೇಕು. ಹಿಂದಿನ ಸ್ಥಿತಿಯ ರೀತಿ ಆಗಬೇಕು. ಮಂದಿರವನ್ನು ಮಂದಿರವನ್ನಾಗಿ ಉಳಿಸಬೇಕು. ಸತ್ಯ ಆವಿಷ್ಕಾರಗೊಳ್ಳುವುದು ಒಳ್ಳೆಯದು’ ಎಂದು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು