ಬುಧವಾರ, ಜನವರಿ 20, 2021
21 °C
ಜಾಗ ಗುರುತಿಸಲು ತಹಶೀಲ್ದಾರ್‌ಗೆ ನಿರ್ದೇಶನ; ಡಿ.ಸಿ

ಶಿಲ್ಪ ಕಲೆ ಶಾಲೆ ನಿರ್ಮಿಸಲು ಪ್ರಸ್ತಾವನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ವಿಶ್ವಕರ್ಮ ಸಮುದಾಯದ ಹಲವು ದಿನಗಳ ಬೇಡಿಕೆಯಂತೆ ಜಿಲ್ಲೆಯಲ್ಲಿ ಶಿಲ್ಪಕಲೆ ಶಾಲೆ ಆರಂಭಿಸಲು ಆಡಳಿತಾತ್ಮಕ ಪ್ರಕ್ರಿಯೆ ಮುಗಿದಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಹೇಳಿದರು.

ಹಾಸನ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಚಾರಿ ಜಯಂತಿಯಲ್ಲಿ ಮಾತನಾಡಿದ ಅವರು, ಶಾಲೆಗೆ ಸೂಕ್ತ ಸ್ಥಳ ಗುರುತಿಸಲು ತಹಶೀಲ್ದಾರ್‌ಗೆ ನಿರ್ದೇಶನ ನೀಡಲಾಗುವುದು ಎಂದರು.

ಅನೇಕ ವಿಶ್ವ ಪರಂಪರೆ ತಾಣಗಳು ಕರ್ನಾಟಕದಲ್ಲಿವೆ. ಅದರಲ್ಲಿ ಶಿಲ್ಪಕಲೆಗಳ ತವರೂರಾದ ಬೇಲೂರು ಮತ್ತು ಹಳೇಬೀಡು ಹೊಯ್ಸಳ ಶೈಲಿಯ ದೇವಾಲಯಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಅಂತಹ ಅದ್ಭುತವಾದ ಶಿಲ್ಪ ಕಲೆಯನ್ನು ಜಕಣಾಚಾರಿ ಕೊಟ್ಟಿದ್ದಾರೆ ಎಂದು ನುಡಿದರು.

ರಾಜ್ಯದಲ್ಲಿ ದೇವಾಲಯಗಳನ್ನು ನಿರ್ಮಿಸಬೇಕೆಂದರೆ ತಮಿಳುನಾಡಿನಿಂದ ಶಿಲ್ಪಿಗಳನ್ನು ಕರೆಸುವಂತಹ ಪರಿಸ್ಥಿತಿ ಇದೆ. ಸರ್ಕಾರ ಈಗಾಗಲೇ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಎಲ್ಲರೂ ನಿಗಮದಿಂದ ಸಿಗುವ ಸವಲತ್ತುಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಮಾತನಾಡಿ, ಅಂಬೇಡ್ಕರ್‌, ಬಸವಣ್ಣ, ಜಕಣಾಚಾರಿ ಅವರಂತ ಮಹನೀಯರನ್ನು ಕೇವಲ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತ ಮಾಡಬಾರದು. ಅವರ ಸಮಾಜದ ಹಾಗೂ ದೇಶದ ಆಸ್ತಿ. ವಿದೇಶದಲ್ಲಿ ಭಾರತದ ಪರಂಪರೆ ಕಲೆಗೆ ತುಂಬಾ ಬೆಲೆ ಇದೆ. ಇಲ್ಲಿನ ಶಿಲ್ಪ ಕಲೆಯನ್ನು ಅಲ್ಲಿ ಕದ್ದು ಮಾರಾಟ ಮಾಡುವ ಸನ್ನಿವೇಶಗಳು ಇದೆ ಎಂದರು.

ವಿಶ್ವಕರ್ಮ ಸಮಾಜದ ಮುಖಂಡ ತಿಮ್ಮಾಚಾರ್‌ ಮಾತನಾಡಿ, ಬೇಲೂರಿನ ಶಿಲ್ಪಕಲೆ ವೈಭವ ಕಾಣುತ್ತಿದ್ದೇವೆ ಎಂದರೆ ಅದಕ್ಕೆ ಅಮರ ಶಿಲ್ಪಿ ಜಕಣಾಚಾರಿ ಕಾರಣ. ಅವರ ಪ್ರತಿಯನ್ನು ಬೇಲೂರಿನ ಚನ್ನಕೇಶ ದೇವಾಲಯದ ಬಳಿ ನಿರ್ಮಿಸುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್‌, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಸ್ವಾತಂತ್ರ‍್ಯ ಹೋರಾಟಗಾರ ಎಚ್‌.ಎಂ ಶಿವಣ್ಣ, ವಿಶ್ವಕರ್ಮ ಸಮಾಜದ ಮುಖಂಡರಾದ ಜಿ.ಕುಮಾರ್‌, ವಾಸುದೇವ್‌, ಜಗದೀಶ್‌, ಕೇಶವ ಪ್ರಸಾದ್‌, ರಾಘವಾಚಾರ್‌, ಲೋಕೇಶ್‌, ಎಚ್‌.ವಿ. ಕುಮಾರ್‌, ಶಿವಶಂಕರಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು