ಶನಿವಾರ, ಏಪ್ರಿಲ್ 1, 2023
23 °C
22ರಿಂದ ದೇವೇಗೌಡರ ನೇತೃತ್ವದಲ್ಲಿ ಧರಣಿ

ಮಾಸ್ಟರ್ ಪ್ಲಾನ್‌ ಪ್ರಕಾರ ವಿಮಾನ ನಿಲ್ದಾಣ ನಿರ್ಮಿಸಲು ರೇವಣ್ಣ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮಾಸ್ಟರ್‌ ಪ್ಲಾನ್‌ ಪ್ರಕಾರ ಹಾಸನ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರವಾಗಿ ವಾರದೊಳಗೆ ನಿರ್ಣಯಕ್ಕೆ ಬಾರದಿದ್ದರೆ ಜುಲೈ 22 ರಂದು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ ಜಿಲ್ಲೆಯ 6 ಜೆಡಿಎಸ್‌ ಶಾಸಕರು ಧರಣಿ ನಡೆಸುವರು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ  ಸಚಿವರಿಗೆ ಪತ್ರ ಬರೆದಿದ್ದು, ಜುಲೈ 21ರೊಳಗೆ ಉತ್ತರ ಬಾರದಿದ್ದರೆ ಬೆಂಗಳೂರು ಅಥವಾ ಹಾಸನದಲ್ಲಿ ಧರಣಿ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2007ರಲ್ಲಿ ಒಟ್ಟು 1,194.15 ಎಕರೆ ಸ್ವಾಧೀನಪಡಿಸಿಕೊಂಡು 776 ಎಕರೆಯಲ್ಲಿ ವಿಮಾನ ನಿಲ್ದಾಣ, 34.10 ಎಕರೆಯಲ್ಲಿ ಸಂಪರ್ಕ ರಸ್ತೆ, 178.5 ಎಕರೆಯಲ್ಲಿ ಗಾಲ್ಫ್‌ ಕ್ಲಬ್ ನಿರ್ಮಾಣ ಸೇರಿದಂತೆ ₹1200 ಕೋಟಿ ಸಮಗ್ರ ಯೋಜನೆ ರೂಪಿಸಲಾಗಿತ್ತು. ಆದರೆ ಈಗ 560 ಎಕರೆಯಲ್ಲಿ ನಾಮಕವಾಸ್ತೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2007ಕ್ಕೂ ಪೂರ್ವದಲ್ಲಿಯೇ 536 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. 2007ರಲ್ಲಿ ದೇವೇಗೌಡರು ಅಡಿಗಲ್ಲು ಹಾಕಿದ್ದರು. 2018ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 446 ಎಕರೆ ಭೂಮಿಯನ್ನು ಬೂವನಹಳ್ಳಿ, ತೆಂಡೆಹಳ್ಳಿ, ದ್ಯಾವಲಾಪುರ, ಮೈಲನಹಳ್ಳಿ, ಲಕ್ಷ್ಮೀಸಾಗರ ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಭೂ ಸ್ವಾಧೀನ ಪ್ರಕ್ರಿಯೆ ನಡೆದು, ಅಂತಿಮ ಅಧಿಸೂಚನೆ ಬಾಕಿ ಉಳಿದಿತ್ತು. 560 ಎಕರೆ ಬಳಸಿಕೊಂಡು, ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿದ್ದ ಭೂಮಿಯನ್ನು ಡಿ ನೋಟಿಫೈ ಮಾಡುವ ಪ್ರಯತ್ನ ನಡೆದಿದೆ ಎಂದು ದೂರಿದರು.

960 ಎಕರೆಯಲ್ಲಿ 536 ಎಕರೆಯನ್ನು ಜುಪೀಟರ್ ಸಂಸ್ಥೆ ನೀಡಿ ವಾಪಸ್‌ ತೆಗೆದುಕೊಳ್ಳಲಾಗಿದೆ. 446 ಎಕರೆಗೆ ನೋಟಿಫಿಕೇಶನ್‌ ಆಗಿದ್ದು, ಇದರಲ್ಲಿ 218 ಎಕರೆ ಸರ್ಕಾರಿ ಭೂಮಿ. ಅಂತಿಮ ನೋಟಿಫಿಕೇಶನ್ ಪ್ರಕಾರ ₹2.49 ಕೋಟಿ ಕಟ್ಟಲಾಗಿದೆ. ₹40.75 ಕೋಟಿ ಭೂ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನದಂತೆ ವಿಮಾನ ನಿಲ್ಧಾಣ ನಿರ್ಮಾಣಕ್ಕೆ 776 ಎಕರೆ ಭೂಮಿ ಅಗತ್ಯವಿದೆ. ಮಾಸ್ಟರ್‌ ಪ್ಲಾನ್‌ ಪ್ರಕಾರ ನಿರ್ಮಾಣ ಮಾಡಲು ಆಗದಿದ್ದರೆ ಯೋಜನೆಯನ್ನು ಸದ್ಯಕ್ಕೆ ನಿಲ್ಲಿಸಬೇಕು ಎಂದರು.

ರಾಜಕೀಯ ಕಾರಣಕ್ಕೆ ಯೋಜನೆ ಮುಂದೂಡುತ್ತಿದ್ದು, ಇದರಿಂದ ವೆಚ್ಚವೂ ಹೆಚ್ಚಾಗುತ್ತಿದೆ. ಈ ವಿಷಯವನ್ನು ರಾಜಕೀಯ ಮಾಡುತ್ತಿಲ್ಲ. ನ್ಯಾಯಯುತ ಬೇಡಿಕೆ ಆಗಿರುವುದರಿಂದ ಜೆಡಿಎಸ್‌ ಕಾರ್ಯಕರ್ತರಲ್ಲದೇ, ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ವಿಮಾಣ ನಿಲ್ದಾಣಕ್ಕೆ ಬ್ರಿಟಿಷರ ಕಾಲದಿಂದಲೂ ಭೂಮಿ ಕಾಯ್ದಿರಿಸಲಾಗಿದೆ. 22ರಂದು ಧರಣಿ ನಡೆಸಿ ಮುಂದೆ ಕಾನೂನು ಹೋರಾಟ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು