ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಡಿ.ಸಿ ಕಚೇರಿ ಎದುರು ಕಟ್ಟಡ ಕಾರ್ಮಿಕರ ಪ್ರತಿಭಟನೆ

ನೈಜ ಕಾರ್ಮಿಕರಿಗೆ ನ್ಯಾಯ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ 23 ಲಕ್ಷ ಕಾರ್ಮಿಕರು ಇದ್ದಾರೆ. ಕಳೆದ ಲಾಕ್‌ಡೌನ್ ವೇಳೆ 4 ಲಕ್ಷಕ್ಕೂ ಅಧಿಕ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಹೊರತುಪಡಿಸಿ ಬೇರೆ
ಯಾವುದೇ ಕಾರ್ಮಿಕರು, ನೌಕರರು, ಅಸಂಘಟಿತ ಕಾರ್ಮಿಕರನ್ನು ಮಂಡಳಿಯಲ್ಲಿ ನೋಂದಾಯಿಸುವಂತಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಂಡಳಿ ಸೌಲಭ್ಯ ಹೆಚ್ಚಳದಿಂದ ಬೇರೆ ಕಾರ್ಮಿಕರನ್ನು ನೋಂದಾಯಿಸಿ ಕಾನೂನು ವ್ಯವಸ್ಥೆ ಅಸ್ಥಿರಗೊಳಿಸಲಾಗುತ್ತಿದೆ. ಇದನ್ನು ತಡೆದು ನೈಜ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಟಿ.ರಾಮೇಗೌಡ ಮಾತನಾಡಿ, 2019-20ನೇ ಸಾಲಿನ ಶೈಕ್ಷಣಿಕ ಧನ ಸಹಾಯ, ಮದುವೆ, ವೈದ್ಯಕೀಯ ಮತ್ತು ಮರಣ ಇತ್ಯಾದಿ ಧನ ಸಹಾಯದ ಅರ್ಜಿಗಳು ಆಗಸ್ಟ್ ತಿಂಗಳಲ್ಲಿ ಇತ್ಯರ್ಥಗೊಳಿಸಬೇಕು. 2020-21ನೇ ಸಾಲಿನ ಶೈಕ್ಷಣಿಕ ಧನ ಸಹಾಯದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಾರ್ಮಿಕರು ವೈದ್ಯಕೀಯ ಧನಸಹಾಯ ಪಡೆಯಬೇಕಾದರೆ ಸಿಜಿಎಚ್‌ಎಸ್ ವರದಿಯನ್ನು ಸರ್ಕಾರಿ ವೈದ್ಯರು ನೀಡಬೇಕು. ಆದರೆ, ಹಣ ನೀಡದ ಕಾರಣ ವೈದ್ಯರು ಕೆಲಸ ಮಾಡುತ್ತಿಲ್ಲ. ಮಂಡಳಿಯು ವೈದ್ಯರನ್ನು ನೇಮಿಸಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದ್ದು, ಕಾರ್ಮಿಕರು ಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಿ ವೈದ್ಯರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಕೋವಿಡ್ ಪರಿಹಾರ ಧನ ಹಲವು ಕಾರ್ಮಿಕರಿಗೆ ದೊರೆತಿಲ್ಲ. ಕಾರ್ಮಿಕ ಇಲಾಖೆಯು ಮತ್ತೊಮ್ಮೆ ನೋಂದಾಯಿತ ಕಾರ್ಮಿಕರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ, ಅವರ ಖಾತೆಗಳಿಗೆ ತಕ್ಷಣವೇ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್.ಗಿರೀಶ್, ಗುರುರೇವಣ್ಣ
ಸಿದ್ದಪ್ಪ, ಮೋಹನ್ ಕುಮಾರ್, ದ್ಯಾವಮ್ಮ, ಲತಾ, ಶಾಂತಮ್ಮ, ಶಿವಮ್ಮ, ಚಂದ್ರು, ಜಯಂತಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು