ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ಮೆಕ್ಕೆಜೋಳಕ್ಕೆ ಹಾನಿ

ಆಲೂರು ಭಾಗದಲ್ಲಿ ಕಟಾವು ಮಾಡಿದ ಜೋಳ ಒಣಗಿಸಲು ರೈತರ ಹರಸಾಹಸ
Last Updated 16 ಅಕ್ಟೋಬರ್ 2020, 4:18 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನಲ್ಲಿ ಕಳೆದ ವಾರ ದಿಂದ ನಿರಂತರವಾಗಿ ಬೀಳುತ್ತಿರುವ ತುಂತುರು ಮಳೆಯಿಂದಾಗಿ, ಕಟಾವು ಮಾಡಿರುವ ಮೆಕ್ಕೆಜೋಳವನ್ನು ಒಣಗಿಸಿ ಮಾರಾಟ ಮಾಡಲು ಸಾಧ್ಯವಾಗದೆ ರೈತರು ಪರಿತಪಿಸುತ್ತಿದ್ದಾರೆ.

ಅತಿವೃಷ್ಟಿ, ಗಾಳಿ, ಮಳೆಯ ನಡುವೆಯೂ ರೈತರು ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದರು. ಆಗಸ್ಟ್ ಮೊದಲ ವಾರದಲ್ಲಿ ಬೀಸಿದ ಗಾಳಿಗೆ ಬಿತ್ತನೆ ಮಾಡಿದ್ದ ಬೆಳೆ ನೆಲಕಚ್ಚಿದ್ದವು. ಅಳಿದುಳಿದಿದ್ದ ಬೆಳೆ ಈಗ ಕಟಾವು ಹಂತ ತಲುಪಿದೆ. ಹೊಲಗಳಲ್ಲಿ ತೇವಾಂಶವಿದ್ದರೂ ಲೆಕ್ಕಿಸದೆ ಮೆಕ್ಕೆಜೋಳ ಫಸಲು ನಷ್ಟವಾಗುತ್ತಿ ರುವುದನ್ನು ತಪ್ಪಿಸಲು ಕಟಾವು ಮಾಡಿ ಕಣ, ರಸ್ತೆಗಳಿಗೆ ತಂದು ಯಂತ್ರದ ಮೂಲಕ ಕಾಳು ಬೇರ್ಪಡಿಸುತ್ತಿದ್ದಾರೆ. ಆಗಾಗ ಬಂದು ಹೋಗುವ ಮಳೆ ನಡುವೆ ಹಗಲಿರುಳೆನ್ನದೆ ಜೋಪಡಿಯಲ್ಲಿ ಒಣಗಿಸುವ ಕಾರ್ಯದಲ್ಲಿ ರೈತರು ಮಗ್ನರಾಗಿದ್ದಾರೆ.

ಸದ್ಯ ಪ್ರತಿ ಕ್ವಿಂಟಲ್ ಜೋಳಕ್ಕೆ ₹700ರಿಂದ ₹1,200 ದರವಿದೆ. ಒಂದೆರಡು ತಿಂಗಳು ಕಳೆದರೆ ಈ ದರವೂ ಇರುವುದಿಲ್ಲ ಎಂಬ ಕಾರಣದಿಂದ ರೈತರು ಕಟಾವಿಗೆ ಮುಂದಾಗುತ್ತಿದ್ದಾರೆ.

ಬೆಳೆಯಲ್ಲಿ ಆದ ನಷ್ಟವನ್ನು ದರದಲ್ಲಾದರೂ ಸರಿಪಡಿಸಿಕೊಳ್ಳುವ ಜೊತೆಗೆ ಬೆಳೆಗಾಗಿ ಮಾಡಿದ್ದ ಸಾಲದಿಂದ ಮುಕ್ತರಾಗುವ ಧಾವಂತದಲ್ಲಿ ರೈತರು ಇದ್ದಾರೆ.

ಜೋಳ ಕಟಾವಿಗೆ ಬಂದಿದೆ. ಒಂದು ವಾರದಿಂದ ಮಳೆ ಬರುತ್ತಿದ್ದು, ಗಾಳಿಗೆ ಸಿಲುಕಿ ಬಿದ್ದಿರುವ ಜೋಳ ಹಾಳಾಗಿದೆ. ಉಳಿದಿರುವ ಜೋಳ ವನ್ನು ಕಟಾವು ಮಾಡಿ ಮಾತೆ ಬಿಡಿಸಲು, ಒಣಗಿಸಲು ಸಾಧ್ಯವಾಗದೆ ಹೊಲದಲ್ಲಿ ಟಾರ್ಪಾಲ್‌ನಿಂದ ಮುಚ್ಚಿಡಲಾಗಿದೆ. ಇದೀಗ ಫಂಗಸ್ ರೋಗ ಎದುರಾಗಿದೆ. ಒಂದೆರಡು ದಿನಗಳಲ್ಲಿ ಬಿಸಿಲು ಬಾರದಿದ್ದರೆ ಇದ್ದದ್ದೂ ಕೊಳೆತು ಹೋಗುತ್ತದೆ ಎಂದು ಕುಂಬಾರಹಳ್ಳಿ ಕೊಪ್ಪಲು ರೈತ ಜೀವನ್ ಅಳಲು ತೋಡಿಕೊಂಡರು.

ಆಗಸ್ಟ್ ತಿಂಗಳಿನಿಂದ ಸುರಿದ ಭಾರಿ ಮಳೆ, ಗಾಳಿಗೆ ತಾಲೂಕಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ, ತೋಟಗಾರಿಕೆ ಹಾಗೂ ನೀರಾವರಿ ಬೆಳೆ ಸಂಪೂರ್ಣ ಹಾನಿಯಾಗಿದೆ.

‘ಸರ್ಕಾರಕ್ಕೆ ವರದಿ ಸಲ್ಲಿಕೆ’

‘ಭಾರಿ ನಷ್ಟ ಅನುಭವಿಸಿದ ರೈತರು ಪರಿಹಾರದ ನಿರೀಕ್ಷೆ ಯಲ್ಲಿದ್ದಾರೆ. ಈಗಾಗಲೇ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಸರ್ಕಾರದಿಂದ ಪರಿಹಾರ ಹಣ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಮ್ಮಣ್ಣಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT