ಬುಧವಾರ, ಆಗಸ್ಟ್ 10, 2022
19 °C
ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯಗಳ ಒಳ ಹರಿವು ಹೆಚ್ಚಳ

ಹಾಸನ: ಬಿಡುವು ನೀಡಿದ ಮುಂಗಾರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶನಿವಾರ ಮಳೆ ಬಿಡುವು ನೀಡಿದ್ದು, ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ.

ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕೆಲವು ಕಡೆ ಆಗಾಗ್ಗೆ ಅಲ್ಪ ಪ್ರಮಾಣ ಮಳೆಯಾಗುತ್ತಿದೆ. ಸಕಲೇಶಪುರ, ಆಲೂರು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಹಾಸನ ನಗರ, ಅರಕಲಗೂಡು, ಬೇಲೂರು, ಹಳೇಬೀಡು ಭಾಗದಲ್ಲಿ ಸಾಧಾರಣ ತುಂತುರು ಮಳೆಯಾಗಿದೆ.

ಆಲೂರು ಪಟ್ಟಣ, ಪಾಳ್ಯ, ಕುಂದೂರು, ಕೆ.ಹೊಸಕೋಟೆ ಹಾಗೂ ಸಕಲೇಶಪುರ ಪಟ್ಟಣ, ಬಾಳ್ಳುಪೇಟೆ, ಬೆಳಗೋಡು, ಹಾನುಬಾಳು, ಮಾರನಹಳ್ಳಿ, ಶುಕ್ರವಾರ ಸಂತೆ, ಹೆತ್ತೂರು, ಹೊಸೂರು, ಯಸಳೂರು ಭಾಗದಲ್ಲಿ ಜೋರು ಮಳೆ ಸುರಿದಿದೆ.

ಮೂಡಿಗೆರೆ ಮತ್ತು ಸಕಲೇಶಪುರ ಭಾಗದಲ್ಲಿ ಜೋರು ಮಳೆಯಾಗುತ್ತಿರುವ ಕಾರಣ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. 2922 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 2889.54 ಅಡಿ ನೀರಿತ್ತು. ಪ್ರಸ್ತುತ 15,364 ಕ್ಯುಸೆಕ್‌ ಒಳ ಹರಿವಿದ್ದು, 200 ಕ್ಯುಸೆಕ್‌ ಹೊರ ಹರಿವು ಇದೆ.

ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯ ಭರ್ತಿಯಾಗಲು ಎರಡು ಅಡಿ ಬಾಕಿ ಇದೆ. 1.51 (966.05 ಮೀ) ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 1.20 ಟಿಎಂಸಿ ನೀರು ಸಂಗ್ರಹವಾಗಿದೆ. 700 ಕ್ಯುಸೆಕ್‌ ಒಳ ಹರಿವು ಇದೆ. 6.68 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಆಲೂರು ಭಾಗದಲ್ಲಿ ಜೋರು ಮಳೆ ಆಗುತ್ತಿರುವುದರಿಂದ ಯಗಚಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಒಂದೂವರೆ ಅಡಿ ನೀರು ಬಂದರೆ ಜಲಾಶಯ ಭರ್ತಿಯಾಗಲಿದೆ. 3.603 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 3.240 ಟಿಎಂಸಿ ನೀರು ಸಂಗ್ರಹವಾಗಿದ್ದು, 3051 ಕ್ಯುಸೆಕ್‌ ಒಳ ಹರಿವು ಇದೆ.

ಕೊಚ್ಚಿ ಹೋದ ಸಸಿ ಮಡಿ

ಹೆತ್ತೂರು: ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಮಳೆಯ ಆರ್ಭಟ ತಗ್ಗಿದ್ದು, ಬಿಡುವು ನೀಡಿ ಆಗಾಗ್ಗೆ
ಸಾಧಾರಣ ಮಳೆ ಸುರಿಯಿತು.

ಐಗೂರು, ಯಡಕೇರಿ, ಅತ್ತಿಗನಹಳ್ಳಿ, ಪಾಲಹಳ್ಳಿ ಗದ್ದೆಗಳಲ್ಲಿ ನೀರು ನಿಂತಿದೆ. ಕೆಲವೆಡೆ ಭತ್ತದ ನಾಟಿ ಮಾಡಲು ತಯಾರಿಸಿದ್ದ ಸಸಿ ಮಡಿ ಕೊಚ್ಚಿಹೋಗಿದೆ. ಸೆಸ್ಕ್‌ ಸಿಬ್ಬಂದಿ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
ನಿರಂತರ ಮಳೆಯಿಂದ ಮಲೆನಾಡಿನ ಜನರು ಮನೆಯಿಂದ ಹೊರ ಬಂದಿರಲಿಲ್ಲ. ಮಳೆ ತುಸು ಬಿಡುವು ನೀಡಿರುವುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು