ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಉಳಿಸಲು ಹೇಮಾವತಿ ನಾಲೆಗೆ ನೀರು ಹರಿಸಿ: ಶಾಸಕ ರೇವಣ್ಣ ಒತ್ತಾಯ

ಸಂಸದ ಪ್ರಜ್ವಲ್‌ ಅಧ್ಯಕ್ಷತೆಯ ದಿಶಾ ಸಭೆಯಲ್ಲಿ ಶಾಸಕ ರೇವಣ್ಣ ಒತ್ತಾಯ
Published 23 ಆಗಸ್ಟ್ 2023, 14:44 IST
Last Updated 23 ಆಗಸ್ಟ್ 2023, 14:44 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ 2.76 ಲಕ್ಷ ಹೆಕ್ಟೇರ್‌ನಲ್ಲಿ ಒಣ ಕೃಷಿ ಚಟುವಟಿಕೆ ನಡೆಯುತ್ತಿದ್ದು, ರಾಗಿ ಸೇರಿದಂತೆ ಇತರ ಬೆಳೆಗಳನ್ನು ಈಗಾಗಲೇ ಬಿತ್ತನೆ ಮಾಡಲಾಗಿದೆ. ಆದರೆ ಮಳೆ ಕೊರತೆಯಿಂದ ಬೆಳೆ ಒಣಗುವ ಪರಿಸ್ಥಿತಿ ಎದುರಾಗಿದೆ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ದಿಶಾ ಸಭೆಯಲ್ಲಿ ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.

ಹೇಮಾವತಿ ಜಲಾಶಯದ ಎಡ ಹಾಗೂ ಬಲದಂಡೆ ನಾಲೆ, ಶ್ರೀರಾಮ ದೇವರಕಟ್ಟೆ ಸೇರಿದಂತೆ ಇತರೆ ನಾಲೆಗಳಿಂದ ನೀರು ಹರಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ಸಂಬಂಧ ಕೃಷಿ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವ ಮೂಲಕ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ವಿಪರೀತವಾಗಿದ್ದು, ಬೇಕಾಬಿಟ್ಟಿಯಾಗಿ ಸಿಎಲ್ ಸೆವೆನ್ ಲೈಸೆನ್ಸ್ ಅನ್ನು ನೀಡಲಾಗುತ್ತಿದೆ. ಹೊಳೆನರಸೀಪುರ ತಾಲ್ಲೂಕಿನ ಶ್ರವಣೂರು ಗ್ರಾಮದಲ್ಲಿ ಮದ್ಯದಂಗಡಿ ಬೇಡ ಎಂದು ಗ್ರಾಮಸ್ಥರು ಮತ್ತು ಮಹಿಳೆಯರು ಮಾನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಗ್ರಾಮಕ್ಕೆ ಪ್ರವೇಶ ಆಗುತ್ತಿದ್ದಂತೆ ಮಹಿಳೆಯರು, ಮಕ್ಕಳು ಈ ರಸ್ತೆಯಲ್ಲಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಊರಿಗೆ ಮದ್ಯದಂಗಡಿ ಬೇಡ ಎಂದು ರೇವಣ್ಣ ಒತ್ತಾಯಿಸಿದರು.

ಈ ಬಗ್ಗೆ ಅಧಿವೇಶನದಲ್ಲೂ ಚರ್ಚೆ ಮಾಡಿದ್ದು, ಗ್ರಾಮದ ನೆಮ್ಮದಿ ಮುಖ್ಯ ಮದ್ಯದ ಅಂಗಡಿ ರದ್ದು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಹಾಸನ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಚಿಲ್ಲರೆ ಅಂಗಡಿಯಲ್ಲಿಯೇ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸ್ವರೂಪ್ ಪ್ರಕಾಶ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಬಕಾರಿ ಇಲಾಖೆ ಅಧಿಕಾರಿಗಳು, ಅಕ್ರಮ ಮದ್ಯ ಮಾರಾಟ ಸಂಬಂಧ ಈ ವರ್ಷ 1,248 ಪ್ರಕರಣಗಳನ್ನು ದಾಖಲಿಸಿದ್ದು, ಮುಂದಿನ ದಿನ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಭೆಯಲ್ಲಿ ಅಬಕಾರಿ ಇಲಾಖೆ ಉಪ ಆಯುಕ್ತ ಗೈರಾಗಿರುವ ಕಾರಣ ನೋಟಿಸ್ ನೀಡುವಂತೆ ಸೂಚನೆ ನೀಡಲಾಯಿತು.

ಶಾಸಕ ಬಾಲಕೃಷ್ಣ ಮಾತನಾಡಿ, ಸರ್ಕಾರ ಆದಾಯ ಹೆಚ್ಚಿಸಲು ಅಕ್ರಮ ಮದ್ಯ ಮಾರಾಟಕ್ಕೆ ಉತ್ತೇಜನ ನೀಡಿದೆ. ಆದ್ದರಿಂದ ಈ ರೀತಿ ನಡೆಯುತ್ತಿದ್ದು, ಇದಕ್ಕೆ ಅಬಕಾರಿ ಇಲಾಖೆಯ ಆಡಳಿತ ವೈಫಲ್ಯವೂ ಕಾರಣ ಎಂದು ಆರೋಪಿಸಿದರು.

ಮದ್ಯ ಮಾರಾಟ ಅವ್ಯಾಹತವಾಗಿರುವುದರಿಂದ ಗ್ರಾಮಗಳಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಕುಟುಂಬದಲ್ಲಿ ವೈಷಮ್ಯ, ಪತಿ, ಪತ್ನಿಯರ ನಡುವೆ ನಿತ್ಯ ಜಗಳವಾಗುತ್ತಿದ್ದು, ಕೊಲೆ ಸುಲಿಗೆ ಅಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ರೇವಣ್ಣ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜನವರಿಯಿಂದ ಇಲ್ಲಿಯವರೆಗೆ 19 ಕೊಲೆ ಪ್ರಕರಣ ನಡೆದಿದ್ದು, ಇಂತಹ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ನಗರದ ರಿಂಗ್ ರಸ್ತೆಯ ಡಾಬಾ, ರೆಸ್ಟೊರೆಂಟ್‌ಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯು ಕೆಲ ಸಿಬ್ಬಂದಿ, ಮಫ್ತಿಯಲ್ಲಿ ರಾತ್ರಿ ವೇಳೆ ಸಂಚಾರ ಮಾಡಬೇಕು. ಇದರಿಂದ ಸ್ವಲ್ಪಮಟ್ಟಿಗೆ ಅಪರಾಧ ಪ್ರಕರಣ ತಡೆಯಲು ಸಹಕಾರಿಯಾಗಲಿದೆ ಎಂದು ರೇವಣ್ಣ ಸಲಹೆ ನೀಡಿದರು.

ನಗರ ಹಾಗೂ ಪಟ್ಟಣದ ಆಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿದರೆ, ಅಪರಾಧ ಪ್ರಕರಣ ಕಡಿಮೆಯಾಗಲಿವೆ. ಈ ಬಗ್ಗೆ ಪಟ್ಟಣ ಪುರಸಭೆ ಹಾಗೂ ನಗರಸಭೆಯಿಂದ ಅನುದಾನ ಬಳಕೆ ಮಾಡಿಕೊಳ್ಳಬಹುದು. ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿಯ ಪಿಡಿಒಗಳು ಮದ್ಯದ ಅಂಗಡಿಯ ಲೈಸೆನ್ಸ್ ನೀಡುತ್ತಿದ್ದಾರೆ. ಇದರಲ್ಲಿ ಬಹಳಷ್ಟು ಅಕ್ರಮವಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಕೆಲ ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಗಿಡ ನೆಡುವ ಯೋಜನೆಯಡಿ ಬರುವ ಹಣವನ್ನು, ಪಹಣಿ ತಿದ್ದುಪಡಿ ಮಾಡುವ ಮೂಲಕ ಅಕ್ರಮ ಎಸಗುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂರಜ್ ರೇವಣ್ಣ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಶಾಸಕ ಬಾಲಕೃಷ್ಣ, ಕೆಲ ವರ್ಷದ ಹಿಂದೆ ಈ ಸಮಸ್ಯೆ ಇತ್ತು. ಇದೀಗ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಬಿ.ಆರ್.ಪೂರ್ಣಿಮಾ ಇದ್ದರು.

ವಿಧಾನಸೌಧದ ಬಳಿಯೂ ನಾಯಿ ಕಾಟ ನಗರ ಪಟ್ಟಣ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಾಲಕೃಷ್ಣ ಮನವಿ ಮಾಡಿದರು. ನಾಯಿ ಕಡಿತಕ್ಕೆ ಇದುವರೆಗೆ 11 ಸಾವಿರಕ್ಕೂ ಹೆಚ್ಚು ಮಂದಿ ಒಳಪಟ್ಟಿದ್ದಾರೆ. ಚನ್ನರಾಯಪಟ್ಟಣದ ಡಿ. ಕಾಳೇನಹಳ್ಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ವಿಧಾನಸೌಧದ ಬಳಿ ನಾವು ವಾಕಿಂಗ್ ಮಾಡುವಾಗಲೂ ಇಬ್ಬರು ಮೂವರು ಓಡಾಡುತ್ತೇವೆ. ಅಲ್ಲಿಯೂ ಗುಂಪು ಗುಂಪಾಗಿ ನಾಯಿಗಳು ಕಾಣಿಸುತ್ತವೆ ಎಂದು ಬಾಲಕೃಷ್ಣ ತಿಳಿಸಿದರು.

ಅನುದಾನ ಬಳಸಲು ಅಡ್ಡಿ ಬೇಡ ಯಗಚಿ ಜಲಾಶಯ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಸೌಕರ್ಯ ಒದಗಿಸಲು ರಸ್ತೆ ಅಭಿವೃದ್ಧಿಗೆ ₹ 39 ಕೋಟಿ ಅನುದಾನ ತರಲಾಗಿತ್ತು. ಆದರೆ ಸ್ಥಳೀಯ ಶಾಸಕರು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಕಾಮಗಾರಿಯಲ್ಲಿ ಯಾವುದೇ ಲೋಪವಾದರೂ ಸ್ಥಳ ಪರಿಶೀಲನೆ ನಡೆಸಲಿ. ಆದರೆ ಬಂದಿರುವ ಅನುದಾನ ಬಳಸಿಕೊಳ್ಳಲು ತಡೆಯೊಡ್ಡ ಬಾರದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. ತೆಂಗು ಬೆಳೆಗಾರರು ಬಹಳ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ ಕೊಬ್ಬರಿ ಬೆಲೆಯೂ ಕಡಿಮೆಯಾಗಿದ್ದು ನಾಫೆಡ್‌ ಮೂಲಕ ಖರೀದಿ ನಿಯಮದಲ್ಲಿ ಬದಲಾವಣೆ ಆಗಬೇಕಿದೆ. ಕೇವಲ 2–3 ತಿಂಗಳು ಮಾತ್ರ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು ಇದರಿಂದ ಕೊಬ್ಬರಿ ಬೆಳೆಗಾರರಿಗೆ ತಮ್ಮ ಬೆಳೆ ಮಾರಾಟಕ್ಕೆ ಅವಕಾಶ ಸಿಗುತ್ತಿಲ್ಲ. ಕನಿಷ್ಠ 9 ತಿಂಗಳು ನಾಫೆಡ್ ಖರೀದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT