ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಕಾಲಿಗೆ ಗುಂಡು ಹಾರಿಸಿ ರೌಡಿಶೀಟರ್‌ ಬಂಧನ

ಮೂರು ಮಂದಿ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಆರೋಪಿಗಳು
Last Updated 4 ನವೆಂಬರ್ 2020, 13:07 IST
ಅಕ್ಷರ ಗಾತ್ರ

ಹಾಸನ: ನಗರದ ಹೊರವಲಯದ ಕೃಷ್ಣನಗರದಲ್ಲಿ ಮಂಗಳವಾರ ರಾತ್ರಿ ಗ್ರಾಮಾಂತರ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಬಸವರಾಜ್‌ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ರೌಡಿಶೀಟರ್‌ ಸುನಿಲ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಗಾಯಗೊಂಡ ಆರೋಪಿಗೆ ಹಿಮ್ಸ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಅರೆಕಲ್ಲು ಹೊಸಹಳ್ಳಿಯ ಸುನಿಲ್‌ ವಿರುದ್ಧ ಮಾರಣಾಂತಿಕ ಹಲ್ಲೆ ಸೇರಿ ಏಳು ಪ್ರಕರಣಗಳು ದಾಖಲಾಗಿವೆ. ಘಟನೆಯಲ್ಲಿ
ಗಾಯಗೊಂಡಿರುವ ಪಿಎಸ್‌ಐ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುನಿಲ್‌ ಮತ್ತು ಆತನ ಸಹಚರರಾದ ಅರೆಕಲ್ಲು ಹೊಸಹಳ್ಳಿ ಸಂತೋಷ್‌, ದೊಡ್ಡ ಮಂಡಿಗನಹಳ್ಳಿಯ ಪ್ರತಾಪ್, ಸೂರಿ, ರವಿ, ಸಂತೋಷ್‌ ಹಾಗೂ ಆಲೂರು ತಾಲ್ಲೂಕಿನ ಸತೀಶ್‌ ಅ.23ರಂದು ಮೂರು ಮಂದಿ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಕೆಲ ದಿನಗಳ ಹಿಂದೆಯೇ ಬಂಧಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸುತ್ತಿದ್ದ ಬಸವರಾಜ್‌, ಸುನಿಲ್‌ ಸೇರಿದಂತೆ ಆರು ಮಂದಿ ಕೃಷ್ಣ ನಗರದ ಬಳಿ ಇರುವುದನ್ನು
ದೃಢಪಡಿಸಿಕೊಂಡು, ದಾಳಿ ನಡೆಸಿದರು. ಮದ್ಯ ಸೇವಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದಾಗ ಮೂವರು ಆರೋಪಿಗಳು ಪರಾರಿಯಾದರು. ಸಿಪಿಐ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದಾರೆ. ‌

ಆದರೆ, ಪ್ರಮುಖ ಆರೋಪಿ ಸುನಿಲ್ ತಪ್ಪಿಸಿಕೊಳ್ಳುವ ಸಲುವಾಗಿ ಪಿಎಸ್ಐ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ. ಇದರಿಂದ ಅವರ ಹೊಟ್ಟೆ, ಎಡಗೈಗೆ ಗಾಯವಾಗಿದೆ. ಅವರ ರಕ್ಷಣೆಗಾಗಿ ಸ್ಥಳದಲ್ಲಿದ್ದ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಸುರೇಶ್‌, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ‌ತಪ್ಪಿಸಿಕೊಂಡ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT