ಹಾಸನ: ಆರ್‌ಎಸ್‌ಎಸ್ ಟೀಕೆ; ಬುದ್ಧಿ ಕಲಿಸಿದ ಮತದಾರರು -ಪ್ರೀತಂ ಗೌಡ

ಹಾಸನ: ‘ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡಿದ ಕಾರಣ, ಬುದ್ಧಿ ಕಲಿಸಲು ಉಪಚುನಾವಣೆಯಲ್ಲಿ ಮತದಾರರು ಜೆಡಿಎಸ್‌ಗೆ ಮತ ಹಾಕಿಲ್ಲ’ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.
ಸಿಂದಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಕಳಪೆ ಪ್ರದರ್ಶನ ತೋರಿಸಿದೆ. ಗೆಲುವು ಸಾಧಿಸಿದ್ದ ಕ್ಷೇತ್ರದಲ್ಲಿ ಐದು ಸಾವಿರ ಮತಗಳು ಬಿದ್ದಿಲ್ಲ. ಜೆಡಿಎಸ್ ಅನ್ನು ಯಾರು ಮುಗಿಸುತ್ತಿದ್ದಾರೋ ಗೊತ್ತಿಲ್ಲ, ಆದರೆ, ಅವರ ತಪ್ಪಿನಿಂದ ಪಕ್ಷ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂಬ ಜನಾಭಿಪ್ರಾಯವಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರು, ಸಂಸದರು ತೆರಳಿ ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಜೆಡಿಎಸ್ ಪಡೆದಿರುವ ಮತಗಳು ಪಕ್ಷದ ಸ್ಥಿತಿಯನ್ನು ಹೇಳುತ್ತದೆ. ಜೆಡಿಎಸ್ ಪಡೆದ ಐದು ಸಾವಿರ ಮತಗಳಿಂದ ಕಾಂಗ್ರೆಸ್‌ಗಾಗಲಿ, ಬಿಜೆಪಿಗಾಗಲಿ ಏನು ಉಪಯೋಗವಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ದೇಶ ಪ್ರೇಮ ಸಂಘಟನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಾರಣ ಜೆಡಿಎಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಅವರು ಆರ್‌ಎಸ್ಎಸ್ ಸಂಘಟನೆ ಬಗ್ಗೆ ಟೀಕಿಸಿರುವುದು ಸರಿಯಲ್ಲ. ಚುನಾವಣೆ ಮುಗಿದಿರುವುದರಿಂದ ಈಗ ಆರ್‌ಎಸ್ಎಸ್ ಹೋರಾಟ, ಸೇವೆ, ಪರಿಶ್ರಮದ ಬಗ್ಗೆ ಚರ್ಚೆ ಮಾಡಿ ಸತ್ಯ ತಿಳಿದುಕೊಳ್ಳಲಿ’ ಎಂದು ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.