ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಬಿಡುವು ಕೊಟ್ಟ ಮಳೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

ಮಳೆ ಸಂಪೂರ್ಣ ಬಿಡುವು, ವಿದ್ಯುತ್ ಕಂಬ ದುರಸ್ತಿ ಕಾರ್ಯ ಚುರುಕು
Last Updated 10 ಆಗಸ್ಟ್ 2020, 12:42 IST
ಅಕ್ಷರ ಗಾತ್ರ

ಹಾಸನ: ಮುಂಗಾರು ಮಳೆ ಸಂಪೂರ್ಣ ಬಿಡುವು ನೀಡಿದ್ದು, ಪ್ರವಾಹ ಭೀತಿಯಲ್ಲಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಹಾಸನ, ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲ್ಲೂಕುಗಳಲ್ಲಿ ತುಂತುರು ಮಳೆಯಾಗುತ್ತಿದೆ. ನಿರಂತರ ಮಳೆಗೆ ಜಿಲ್ಲಾದಾದ್ಯಂತ 400ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಸಕಲೇಶಪುರ, ಆಲೂರು ವ್ಯಾಪ್ತಿಯಲ್ಲೇ ಹೆಚ್ಚಿನ ಮರಗಳು ಬಿದ್ದಿದ್ದು, ಆರು ಜನರನ್ನು ಒಳಗೊಂಡ ನಾಲ್ಕು ತಂಡಗಳನ್ನು ಅರಣ್ಯ ಇಲಾಖೆ ನೇಮಿಸಿದೆ.

500ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು, ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಅಗತ್ಯ
ಸಾಧನಗಳೊಂದಿಗೆ ಸಿಬ್ಬಂದಿ ಮರ ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ರಸ್ತೆಗೆ ಸಾಕಷ್ಟು ಮರಗಳು ಬಿದ್ದಿವೆ. ವಿದ್ಯುತ್‌ ಕಂಬಗಳ ದುರಸ್ತಿ ಕಾರ್ಯದಲ್ಲಿ ಸೆಸ್ಕ್‌ ಸಿಬ್ಬಂದಿ ನಿರತರಾಗಿದ್ದಾರೆ. ಈಗಾಗಲೇ 200 ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಸಮಸ್ಯೆ ಬಗೆಹರಿಸಲಾಗಿದೆ.

ಮಲೆನಾಡು ಭಾಗದಲ್ಲಿ ಮಳೆ ತಗ್ಗಿರುವ ಕಾರಣ ನೀರು ಕಡಿಮೆ ಆಗಿದೆ. ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಒಳ ಹರಿವು 11,990 ಕ್ಯುಸೆಕ್‌ಗೆ ಇಳಿಕೆಯಾಗಿದೆ. ಶುಕ್ರವಾರ 47 ಹಾಗೂ ಶನಿವಾರ 50 ಸಾವಿರ ಕ್ಯುಸೆಕ್‌ ಒಳ ಹರಿವಿತ್ತು. ಸೋಮವಾರ ಹೊರ ಹರಿವು 3880 ಕ್ಯುಸೆಕ್ ಇದೆ‌.2922 ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ
2918.88 ಅಡಿ ನೀರಿದೆ. ‌

ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದ ಸಕಲೇಶಪುರ ತಾಲ್ಲೂಕು ಚಂಗಡಿಹಳ್ಳಿ ಗ್ರಾಮದ ಮನೋಜ್‌ ಎಂಬುವರಿಗೆ ಸೇರಿದ 10 ಎಕರೆ ತೋಟದ ಬೆಳೆ ನಾಶವಾಗಿದೆ. ಕಾಫಿ, ಮೆಣಸು, ಅಂಟುವಾಳ, ಹೆಬ್ಬೇವು, ಬಾಳೆ ಬೆಳೆ ಸಂಪೂರ್ಣ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸವಂತಾಗಿದೆ.

ಧಾರಾಕಾರ ಮಳೆಯಿಂದಾಗಿ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಭತ್ತ, ಕಾಫಿ ತೋಟ, ಮೆಕ್ಕೆಜೋಳ ಸೇರಿದಂತೆ ಸಾವಿರಾರು ಎಕರೆ ಪ್ರದೇಶದ ಬೆಳೆ ಹಾಳಾಗಿದೆ. ಬಿರುಗಾಳಿ ಮಳೆಗೆ ಆಲೂಗಡ್ಡೆ, ಶುಂಠಿ, ಮುಸುಕಿನ ಜೋಳದ ಬೆಳೆಗಳು ಹಾನಿಗೀಡಾಗಿದ್ದು. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಸುಕಿನ ಜೊಳದ ಹೊಲಗಳಲ್ಲಿ ಮಳೆಯ ನೀರು ಸಂಗ್ರಹವಾಗಿ ಬಹುಪಾಲು ಹಾನಿಯಾಗಿದೆ.

ಆಲೂರು ತಾಲ್ಲೂಕಿನ ರಾಮನಹಳ್ಳಿ, ಸುಳಗೋಡು, ಗರಿಘಟ್ಟ, ಬಸವನಹಳ್ಳಿ, ಗಂಜಿಗೆರೆ, ಸಿದ್ದಾಪುರ ಮತ್ತು ಹಾಸನ ತಾಲ್ಲೂಕಿನ ಗೋವಿಂದಪುರ, ಆಲದಹಳ್ಳಿ, ಕಂಚಮಾರನಹಳ್ಳಿ, ಕಡಗದಲ್ಲಿ ಸೇರಿ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಮೆಕ್ಕೆಜೋಳ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಮರುಗುತ್ತಿದ್ದಾರೆ.

ಫಸಲಿಗೆ ಬಂದಿದ್ದ ಮೆಕ್ಕೆಜೋಳ ನೆಲಕಚ್ಚಿರುವುದಕ್ಕೆ ರೈತರಾದ ಲೋಹಿತ್‌, ಯೋಗಣ್ಣ, ಮಂಜನಾಥ್‌ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

‘ಮುಸುಕಿನ ಜೋಳದ ಬೆಳೆ ಈಗ ತಾನೇ ಹೂವು ಬಿಟ್ಟು ಮೋತೆ ಮೂಡುವ ಸಂದರ್ಭದಲ್ಲಿ ಅತಿಯಾದ ಮಳೆ ಹಾಗೂ
ಬಿರುಗಾಳಿಯಿಂದಾಗಿ ಬೆಳೆ ಕಚ್ಚಿದೆ. ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು’ ಎಂದು ಹಾಸನ ಎಪಿಎಂಸಿ
ಅಧ್ಯಕ್ಷ ಮಂಜೇಗೌಡ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT