ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ಹೊರ ವರ್ತುಲ ರಸ್ತೆ ಇಂದು ಲೋಕಾರ್ಪಣೆ

ಜಾನೇಕೆರೆ ಆರ್. ಪರಮೇಶ್‌
Published 24 ಫೆಬ್ರುವರಿ 2024, 5:55 IST
Last Updated 24 ಫೆಬ್ರುವರಿ 2024, 5:55 IST
ಅಕ್ಷರ ಗಾತ್ರ

ಸಕಲೇಶಪುರ: ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಂಡ 25 ವರ್ಷಗಳ ನಂತರ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಟ್ಟಣದ ಹೊರ ವರ್ತುಲ ರಸ್ತೆ ಫೆ. 24ರಂದು ಪ್ರಾಯೋಗಿಕವಾಗಿ ಲೋಕಾರ್ಪಣೆಗೊಳ್ಳಲಿದೆ.

ಕಾಫಿ, ಏಲಕ್ಕಿ, ಕಾಳುಮೆಣಸು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮಲೆನಾಡಿನ ತಾಲ್ಲೂಕು ಕೇಂದ್ರ ಸಕಲೇಶಪುರ ಪಟ್ಟಣದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗಿದೆ. ರಾಜಧಾನಿ ಬೆಂಗಳೂರು, ಬಂದರು ನಗರಿ ಮಂಗಳೂರು, ಉಡುಪಿ ಕರಾವಳಿ ನಡುವಿನ ಈ ಹೆದ್ದಾರಿಯಲ್ಲಿ ಎರಡು ದಶಕಗಳ ಹಿಂದೆಯೇ ನಿತ್ಯ 20 ಸಾವಿರಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿದ್ದವು.

ಪಟ್ಟಣದೊಳಗೆ ಕಿಷ್ಕಿಂದೆಯಾದ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಸಂಚಾರ ದಟ್ಟಣೆ, ರಸ್ತೆ ಅಪಘಾತಗಳಿಂದ ಸಾವು– ನೋವು, ವಾಹನ ನಿಲುಗಡೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೋಬಳಿ ಕೇಂದ್ರಗಳಲ್ಲಿ ರಸ್ತೆ ವಿಸ್ತರಣೆ ಮಾಡಿದರೂ, ಇಲ್ಲಿ ಮಾತ್ರ ಹೆದ್ದಾರಿಯನ್ನೇ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ, ಕೆಲವು ಕಟ್ಟಡ ಮಾಲೀಕರ ವಿರೋಧದಿಂದ ಇದುವರೆಗೂ ಈ ರಸ್ತೆ ವಿಸ್ತರಣೆ ಆಗಲೇ ಇಲ್ಲ ಎಂದು ಪಟ್ಟಣದ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

25 ವರ್ಷಗಳ ಹಿಂದೆಯೇ ಪಟ್ಟಣಕ್ಕೆ ಹೊರ ವರ್ತುಲ ರಸ್ತೆ ಅವಶ್ಯಕವಾಗಿದ್ದು, 1989ರಲ್ಲಿಯೇ ಬೈಪಾಸ್ ರಸ್ತೆಗೆ ರಾಷ್ಟೀಯ ಹೆದ್ದಾರಿ ಇಲಾಖೆಯಿಂದ ಅನುಮೋದನೆ ದೊರೆತಿತ್ತು. 1991ರಿಂದ ಭೂಸ್ವಾಧೀನ ಪ್ರಕ್ರಿಯೆಗಳು ಪ್ರಾರಂಭಗೊಂಡವು. ಸಮಸ್ಯೆಯ ಗಂಭೀರತೆ ತಿಳಿದಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯದಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು.

2012-13 ರಲ್ಲಿ ಹಾಸನ-ಬಿ.ಸಿ.ರೋಡ್ ನಡುವಿನ ಚತುಷ್ಪಥಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮತ್ತೊಮ್ಮೆ ಭೂಸ್ವಾಧೀನ ಪ್ರಕ್ರಿಯೆ ಶುರುವಾಯಿತು. 1991 ಹಾಗೂ 2012 ಎರಡು ಬಾರಿ ಭೂಸ್ವಾಧೀನ ಆದರೂ, ಕಾಮಗಾರಿ ಪ್ರಾರಂಭವಾಗಿದ್ದು 2017ರ ನಂತರ. ಅಲ್ಲಿಂದ ಇಲ್ಲಿಯವರೆಗೆ ಸತತ 7 ವರ್ಷಗಳ ಕಾಲ ಕುಂಟುತ್ತ ಸಾಗಿದ ಹೊರ ವರ್ತುಲ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಹೇಮಾವತಿ ನದಿಗೆ ಸುಸಜ್ಜಿತವಾದ ಸೇತುವೆ ನಿರ್ಮಾಣವಾಗಿದೆ. ಆದರೆ ಒಂದು ಬದಿಯ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಮತ್ತೊಂದು ಬದಿಯಲ್ಲಿ ಸೇತುವೆ ಮೇಲೆ ರಸ್ತೆ ಕಾಂಕ್ರೀಟಿಕರಣ ಹಾಗೂ ಪ್ಯಾರಾಪೀಟ್‌ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೊಲ್ಲಹಳ್ಳಿಯಿಂದ ತೋಟದಗದ್ದೆ ತಿರುವಿನವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ.

ರಸ್ತೆ ವಿಭಜಕ ಕಾಮಗಾರಿ, ತೋಟದಗದ್ದೆ, ಮಲ್ಲಿಕಾರ್ಜುನ ಬಡಾವಣೆ, ಸದಾಶಿವ ಬಡಾವಣೆ, ಮಳಲಿಯಿಂದ ಮುಂದೆ ಹೊರಟ್ಟಿ ಬಳಿ ಹೀಗೆ ಹಲವೆಡೆ ಸುಮಾರು 60 ರಿಂದ 80 ಅಡಿ ಎತ್ತರದವರೆಗೆ ಭೂಮಿಯನ್ನು 90 ಡಿಗ್ರಿಯಲ್ಲಿ ಕತ್ತರಿಸಿರುವುದಕ್ಕೆ ಯಾವುದೇ ತಡೆಗೋಡೆ ಕಾಮಗಾರಿ ಆಗಿಲ್ಲ. ಒಂದು ಮಳೆ ಬಂದರೆ ಹೆದ್ದಾರಿ ಮೇಲೆ ಮಣ್ಣು ಕುಸಿದು ಅನಾಹುತ ಆಗುವುದು ಖಚಿತ ಎಂದು ಇಲ್ಲಿನ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬೈಪಾಸ್‌ ನೇರವಾಗಿರುವುದರಿಂದ ಹೆದ್ದಾರಿಯಲ್ಲಿ ವೇಗವಾಗಿ ವಾಹನಗಳು ಸಂಚರಿಸುತ್ತವೆ. ಮಳಲಿ, ಕೌಡಹಳ್ಳಿ, ಸದಾಶಿವನಗರ, ಮಲ್ಲಿಕಾರ್ಜುನ ನಗರ ಬಡಾವಣೆಗಳಿಂದ ಹೆದ್ದಾರಿಗೆ ಬಂದು ಸೇರುವ ಹಾಗೂ ಹೆದ್ದಾರಿಯಿಂದ ಹೋಗುವುದಕ್ಕೆ ಯಾವುದೇ ವ್ಯವಸ್ಥೆ ಇಲ್ಲದೇ ಇರುವುದರಿಂದ ರಸ್ತೆ ಅಪಘಾತಗಳು ಆಗುವ ಸಾಧ್ಯತೆಗಳಿವೆ ಎಂದು ಹೇಳುತ್ತಿದ್ದಾರೆ.

ಶಾಸಕ ಸಂಸದರ ಸೂಚನೆಯಂತೆ ಆರಂಭ

ಕೊಲ್ಲಹಳ್ಳಿ–ತೋಟದಗದ್ದೆ 6 ಕಿ.ಮೀ. ಬೈಪಾಸ್‌ ರಸ್ತೆ ಸೇತುವೆ ಕಾಮಗಾರಿ ಶೇ 90 ರಷ್ಟು ಮುಗಿದಿದೆ. ಸಕಲೇಶ್ವರಸ್ವಾಮಿ ರಥೋತ್ಸವ ಫೆ. 25 ಇರುವುದರಿಂದ ಸಾವಿರಾರು ವಾಹನಗಳು ಪಟ್ಟಣದೊಳಗೆ ಹೋಗುವುದರಿಂದ ಸಂಚಾರಕ್ಕೆ ಸಂಚಕಾರ ಆಗುತ್ತದೆ. ಬೈಪಾಸ್‌ನಲ್ಲಿ ವಾಹನಗಳ ಸಂಚಾರ ಕೂಡಲೇ ಪ್ರಾರಂಭಿಸುವಂತೆ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಶಾಸಕ ಸಿಮೆಂಟ್ ಮಂಜು ಅವರು ಸೂಚನೆ ನೀಡಿದ್ದಾರೆ. ಫೆ.24ರಂದೇ ಬೈಪಾಸ್‌ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಪ್ರವೀಣ್‌ ತಿಳಿಸಿದರು. ಬೈಪಾಸ್‌ನ ಒಂದು ಕಡೆ ಕೆಪಿಟಿಸಿಎಲ್‌ ಹೈಟೆನ್ಷನ್‌ ಮಾರ್ಗ ಇರುವುದರಿಂದ ಭಾರಿ ವಾಹನಗಳ ಸಂಚಾರಕ್ಕೆ ಕೆಪಿಟಿಸಿಎಲ್‌ ಅನುಮತಿಗಾಗಿ ಕಾಯುತ್ತಿದ್ದೇವೆ. ಅನುಮತಿ ದೊರೆಯದೇ ಇದ್ದರೂ ಲಘು ವಾಹನಗಳ ಸಂಚಾರವಂತೂ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.

ಫೆ.25ರಂದು ಸಕಲೇಶ್ವರಸ್ವಾಮಿ ರಥೋತ್ಸವ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಒತ್ತಡ ಹಾಕಿ ಫೆ.24ರಿಂದಲೇ ಬೈ‍ಪಾಸ್‌ನಲ್ಲಿ ವಾಹನ ಸಂಚಾರ ಪ್ರಾರಂಭಿಸಲಾಗುತ್ತಿದೆ.
ಸಿಮೆಂಟ್ ಮಂಜು, ಶಾಸಕ
ಸಕಲೇಶಪುರ ತಾಲ್ಲೂಕು ಕೊಲ್ಲಹಳ್ಳಿ ಬಳಿ ಹೊರ ವರ್ತುಲ ರಸ್ತೆ.
ಸಕಲೇಶಪುರ ತಾಲ್ಲೂಕು ಕೊಲ್ಲಹಳ್ಳಿ ಬಳಿ ಹೊರ ವರ್ತುಲ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT