ಮಂಗಳವಾರ, ಮೇ 18, 2021
23 °C
ಹಾಸನದಲ್ಲಿ 'ನಾವು ಭಾರತೀಯರು' ಕಾರ್ಯಕ್ರಮ

ಸಂವಿಧಾನ ಆಶಯದಂತೆ ಬದುಕಲು ಬಿಡಿ: ಲೇಖಕಿ ಭಾನು ಮುಷ್ತಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಸಂವಿಧಾನದ ಆಶಯದಂತೆ ಬದುಕಲು ಬಿಡಿ. ದೇಶಪ್ರೇಮದ ಬಿರುದನ್ನು ನಿಮ್ಮಿಂದ ಪಡೆಯಬೇಕಿಲ್ಲ’ ಎಂದು ವಕೀಲೆ ಬಾನು ಮುಷ್ತಾಕ್ ಹೇಳಿದರು.

ನಗರದ ಜಿಎಂ ಶಾಲೆ ಆವರಣದಲ್ಲಿ ಶನಿವಾರ ಇತ್ತೆಹಾದ್-ಎ-ಮಿಲ್ಲತ್ ಮತ್ತು ಸಂವಿಧಾನ ಸಂರಕ್ಷಣಾ ಜಾಗೃತಿ ವೇದಿಕೆ ಏರ್ಪಡಿಸಿದ್ದ 'ನಾವು ಭಾರತೀಯರು' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪ್ರತಿ ಮಾತಿಗೂ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಿರುವ ಮಹಾನುಭಾವರು ಪಾಕಿಸ್ತಾನ ಟ್ರಾವೆಲ್ ಏಜೆಂಟರಿರಬೇಕು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಮುಸ್ಲಿಂರು ರಕ್ತ ಸುರಿಸಿದ್ದಾರೆ. ಪಾಕಿಸ್ತಾನಕ್ಕೆ ಹೋಗುವ ಅವಕಾಶವನ್ನು ಆ ದಿನಗಳಲ್ಲಿಯೇ ಕೈ ಬಿಟ್ಟು ಭಾರತದಲ್ಲಿ ಇರುತ್ತೇವೆ ಎಂದವರನ್ನು ಬಲವಂತವಾಗಿ ಓಡಿಸುವ ಪ್ರಯತ್ನ ಈಗ ನಡೆಯುತ್ತಿದೆ’ ಎಂದು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‌ಸಿ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಭಾರತೀಯ ಪ್ರಜೆ ಎಂದು ದೃಢಪಡಿಸಲು ಆಧಾರ್, ಡಿಎಲ್, ಮತದಾರರ ಗುರುತಿನ ಚೀಟಿ ಯಾವುದು ಬೇಡ. ಪೂರ್ವಜರ ಮೂಳೆಗಳು ಸಿಗದಿರುವ ಸಂದರ್ಭದಲ್ಲಿ ಅವರ ದಾಖಲೆಗಳನ್ನು ಎಲ್ಲಿಂದ ತರಬೇಕು’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ಸಿಎಎ ಜಾರಿಗೆ ಅಧಿಸೂಚನೆ ಹೊರಡಿಸಿದೆ. ಆದರೆ, ಎನ್‍ಆರ್‌ಸಿ ಹಾಗೂ ಸಿಎಎ ಸೆಕ್ಷೆನ್ 2ರಲ್ಲಿ ತಿದ್ದುಪಡಿ ತರಬೇಕು. ಮುಸ್ಲಿಂ ಸಮುದಾಯ ಹೊರತುಪಡಿಸಿ ಉಳಿದೆಲ್ಲ ಧರ್ಮದವರು ಭಾರತದಲ್ಲಿ ಇರಬಹುದು. ಮುಸ್ಲಿಂರು ಕಡ್ಡಾಯವಾಗಿ ದಾಖಲಾತಿ ತೋರಿಸಬೇಕೆಂದು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಕೇಳಿರುವ ದಾಖಲೆಗಳ ಒದಗಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸಿದರು.

ಬಿ.ಆರ್. ಅಂಬೇಡ್ಕರ್ ಜೀವನದ ತಪಸ್ಸಿನ ಫಲವಾದ ಸಂವಿಧಾನದಿಂದ ಭಾರತೀಯರು ಸುರಕ್ಷಿತವಾಗಿದ್ದೇವೆ. ಆದರೆ, ಅದಕ್ಕೆ ತಿದ್ದುಪಡಿ ತರುವ ಕೆಟ್ಟ ಕೆಲಸಕ್ಕೆ ಪ್ರಸ್ತುತ ಸರ್ಕಾರ ಕೈ ಹಾಕಿದೆ. ಮುಸ್ಲಿಂರ ವಿರುದ್ಧದ ದಮನಕಾರಿ ನೀತಿಗೆ ರಾಷ್ಟ್ರವೇ ವಿರೋಧಿಸಿದೆ ಎಂದರು.

ಅಸ್ಸಾಂ ಮುಖ್ಯಮಂತ್ರಿ, ನಾಲ್ಕು ಬಾರಿ ಶಾಸಕಿ ಹಾಗೂ ಉಪನ್ಯಾಸಕಿಯಾಗಿ ಕೆಲಸ ಮಾಡಿರುವ ಅನ್ವರಾ ತೈಮ ಅವರನ್ನು ಪೌರತ್ವ ಪಟ್ಟಿಯಿಂದ ಕೈ ಬಿಡಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಭಾರತದ ಪರವಾಗಿ ಹೋರಾಡಿದ ಸೈನಿಕ ಸನಾವುಲ್ಲಾ ಅವರನ್ನು ಭಾರತದ ಪ್ರಜೆಯಲ್ಲ ಎಂದು ಘೋಷಿಸಿದ್ದಾರೆ. ಒಟ್ಟಿನಲ್ಲಿ ಮುಸ್ಲಿಂರೆಂದರೆ ಇವರಿಗೆ ಬೇಡದ ವಸ್ತುವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಮಿಲಿಟರಿ ರಹಸ್ಯಗಳನ್ನು ಸೋರಿಕೆ ಮಾಡಿದವರು, ರಾಷ್ಟ್ರದ ಸಂಪತ್ತನ್ನು ಮಾರುವವರು ಬಿಜೆಪಿ ದೃಷ್ಟಿಯಲ್ಲಿ ದೇಶದ್ರೋಹಿಗಳಲ್ಲ. ಇಂತವರನ್ನೆಲ್ಲ ಅಪ್ಪುವ ಸರ್ಕಾರಕ್ಕೆ ಭಾರತೀಯ ಮುಸ್ಲಿಂರು ಬೇಡವಾಗಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಮಾತನಾಡಿ, ದೇಶದಲ್ಲಿ ಪರಿಹರಿಸಬೇಕಾದ ಅನೇಕ ಸಮಸ್ಯೆಗಳಿದ್ದರೂ ಕೇಂದ್ರ ಸರ್ಕಾರ ಒಂದು ಸಮುದಾಯದ ವಿರುದ್ಧ ದ್ವೇಷ ಸಾಧಿಸುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಈಗಾಗಲೇ ಕಾಯ್ದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿರುವುದರಿಂದ ಅದರ ಕುರಿತು ಚರ್ಚಿಸಿ ಯಾವ ಪ್ರಯೋಜನವಿಲ್ಲ. ಆದರೆ, ನಾಗರಿಕರನ್ನು ಆತಂಕಕ್ಕೆ ತಳ್ಳಿರುವ ಕಾನೂನಿಗೆ ತಿದ್ದುಪಡಿ ತರುವಂತೆ ಹೋರಾಟ ರೂಪಿಸಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ನಗರಸಭೆ ಸದಸ್ಯೆ ರೂಹಿ, ಅಲಿಮಾ ಮುಬಾರಕ್ ಖಾನಂ, ಡಾ. ಮಿಸ್ಬಾ ಸೆಹರ್, ಡಾ. ಅಂಜುಮ್, ಮುಲ್ಲಾ ಬಸೀರತ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು