ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಭಿವೃದ್ಧಿಗೆ ಎರಡು ತಾಸು ಮೀಸಲಿಡಿ

ಚನ್ನಪಟ್ಟಣ ಕೆರೆ ಪುನಶ್ಚೇತನ ಕುರಿತು ಚಿಂತನಾ ಸಭೆ
Last Updated 13 ಡಿಸೆಂಬರ್ 2020, 10:32 IST
ಅಕ್ಷರ ಗಾತ್ರ

ಹಾಸನ: ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ₹37 ಕೋಟಿ ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಪ್ರತಿ ಭಾನುವಾರ ಎರಡು ಗಂಟೆ ಸಮಯವನ್ನು ಕೆರೆ ಸುತ್ತಮುತ್ತ ಶ್ರಮದಾನಕ್ಕೆ ಮೀಸಲಿಡಲು ತೀರ್ಮಾನಿಸಲಾಯಿತು.

ನಗರದ ಹೊಸಬಸ್ ನಿಲ್ದಾಣ ಬಳಿ ಚನ್ನಪಟ್ಟಣ ಕೆರೆ ಆವರಣದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಭಾನುವಾರ ಕರೆದಿದ್ದ
‘ಚನ್ನಪಟ್ಟಣ ಕೆರೆ ಪುನಶ್ಚೇತನ ಕುರಿತು ಚಿಂತನಾ ಸಭೆ’ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಹಸಿರು ಭೂಮಿ ಪ್ರತಿಷ್ಠಾನದ ಪದಾಧಿಕಾರಿ ರಾಜೀವೇಗೌಡ ಮಾತನಾಡಿ, 159 ಎಕರೆ ವಿಸ್ತೀರ್ಣದ ಚನ್ನಪಟ್ಟಣ ಕೆರೆ ವಿವಿಧ ಸರ್ಕಾರದ ಯೋಜನೆಗಳಿಗೆ ಹಂಚಿ ಹೋಗಿ ಇನ್ನು ಅಂದಾಜು 100 ಎಕರೆ ಉಳಿದಿರಬಹುದು. ಹಾಗಾಗಿ ಸುತ್ತಲಿನ ಬಡಾವಣೆ ಜನರು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕೈ ಜೋಡಿಸಬೇಕು. ಹಿಂದಿನ ಸಮ್ಮಿಶ್ರ ಸರ್ಕಾರ ನೀಡಿದ್ದ 144 ಕೋಟಿ ಅನುದಾನವನ್ನು ಸ್ಥಳೀಯ ಶಾಸಕ ಪ್ರೀತಂ ಜೆ.ಗೌಡ ಅವರು ಅನುದಾನವನ್ನು ವಿಭಜಿಸಿ ನಗರ ಸುತ್ತಮುತ್ತಲಿನ 6 ಕೆರೆಗಳು ಹಾಗೂ 9 ಉದ್ಯಾನಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದರು. ಅದರಂತೆ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ₹37 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.

ಹೋರಾಟಗಾರ ಬಾಳ್ಳು ಗೋಪಾಲ್‌ ಮಾತನಾಡಿ, ಹೊಸ ಬಸ್‌ ನಿಲ್ದಾಣದಿಂದ ರಾಜಘಟ್ಟಕ್ಕೆ ಸಂಪರ್ಕ ಕಲ್ಪಿಸಲು ಸರಿಯಾದ ರಸ್ತೆ ಇಲ್ಲ. ನಗರಕ್ಕೆ ಬರಲು 4–5 ಕಿ.ಮೀ. ಬಳಸಿಕೊಂಡು ಬರಬೇಕು. ಅಲ್ಲದೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿದ್ದು, ಕಾಮಗಾರಿ ತ್ವರಿತಗೊಳಿಸುವಂತೆ ಒತ್ತಡ ಹೇರಬೇಕಿದೆ ಎಂದರು.

ಸಭೆಯಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ, ಉಪಾಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಎಚ್.ಎಂ. ಶಿವಣ್ಣ, ನಗರಸಭೆ ಸದಸ್ಯ ಮೋಹನ್, ಹೋರಾಟಗಾರ ಚೌಡಳ್ಳಿ ಜಗದೀಶ್, ನಿವಾಸಿಗಳಾದ ಜಯರಾಜು, ಮಮತಾ, ತೋಫಿಕ್ ಅಹಮದ್, ವಕೀಲರಾದ ಗಿರೀಜಾಂಬಿಕ, ಸಂಗೀತಾ ಹಾಗೂ ನಿವಾಸಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT