ಮಂಗಳವಾರ, ಮೇ 18, 2021
23 °C
‘ಇಂದ್ರಿಯ-2018’ ಸಮಾರೋಪ ಸಮಾರಂಭ

ಶೀಘ್ರ ಜಿಲ್ಲಾ ಮಾದರಿ ವಸ್ತುಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನದ ರಾಜೀವ್ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಂಗ ರಚನಾ ಶಾಸ್ತ್ರದ ಮಾದರಿಗಳನ್ನು ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಶಾರೀರ ರಚನಾ ವಿಭಾಗದ ಮುಖ್ಯಸ್ಥೆ ಡಾ. ಉಮಾ.ಬಿ.ಗೋಪಾಲ್ ಮೌಲ್ಯಮಾಪನ ಮಾಡಿದರು.

ಹಾಸನ : ‘ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರುವ ಕೆಲಸವನ್ನು ಇಂದಿನ ಶಿಕ್ಷಣ ಸಂಸ್ಥೆಗಳು ಮಾಡಬೇಕಿದೆ. ಆಗ ವಿದ್ಯಾರ್ಥಿಯಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ’ ಎಂದು ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಶಾರೀರ ರಚನಾ ವಿಭಾಗದ ಮುಖ್ಯಸ್ಥೆ ಡಾ. ಉಮಾ.ಬಿ.ಗೋಪಾಲ್ ಅಭಿಪ್ರಾಯಪಟ್ಟರು.

ನಗರದ ರಾಜೀವ್ ಪ್ಯಾರಾ ಮೆಡಿಕಲ್ ಕಾಲೇಜು, ರಾಜೀವ್ ನರ್ಸಿಂಗ್ ಕಾಲೇಜ್ ಮತ್ತು ರತ್ನ ನರ್ಸಿಂಗ್ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂಗ ರಚನಾ ಶಾಸ್ತ್ರದ ಮಾದರಿಗಳ ವಸ್ತು ಪ್ರದರ್ಶನ ‘ಇಂದ್ರಿಯ-2018’ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ಮಾದರಿಗಳನ್ನು ಮೌಲ್ಯಮಾಪನ ಮಾಡಿ ಮಾತನಾಡಿದರು.

ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಮೃತದೇಹ ಛೇದಿಸಿ ಕಲಿಯುವ ಅವಕಾಶ ಇಲ್ಲದಿರುವುದರಿಂದ ಮಾದರಿ ವಸ್ತು ಪ್ರದರ್ಶಗಳು ಶೈಕ್ಷಣಿಗೆ ಪ್ರಗತಿಗೆ ಸಹಾಯಕವಾಗಲಿದೆ. ವಿದ್ಯಾರ್ಥಿಗಳು ತಮ್ಮ ಬುದ್ಧಿಶಕ್ತಿ ಬಳಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಕೆ.ಜೆ. ಗಿರೀಶ್ ಮಾತನಾಡಿ, ವಿದ್ಯಾರ್ಥಿಗಳು ಕೌಶಲ ಹೆಚ್ಚಿಸಿಕೊಳ್ಳಲು ಗಮನ ಹರಿಸಬೇಕು. ಇಂದಿನ ಪದವೀಧರರಲ್ಲಿ ಕೌಶಲ ಕೊರತೆ ಹೆಚ್ಚು ಕಾಣುತ್ತಿದೆ. ಕೇವಲ ಪದವಿ ಪಡೆದರೆ ಸಾಲದು. ವೃತ್ತಿಪರತೆ ಹಾಗೂ ವೃತಿ ಕೌಶಲ ಪ್ರತಿಯೊಬ್ಬ ಪದವೀಧರರಲ್ಲಿ ಕಾಣುವಂತಾಗಬೇಕು. ಮಾದರಿ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಕೂಡಿ ಬಾಳುವ ಹಾಗೂ ಒಟ್ಟಾಗಿ ತಮ್ಮ ಪ್ರತಿಭೆ ಪ್ರದರ್ಶಿಸುವ ಕಲೆಯನ್ನು ಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ. ಮುಂದೆ ಸಮಾಜದಲ್ಲಿ ಒಟ್ಟಿಗೆ ಬದುಕುವ ಕಲೆಯನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ ಎಂದರು.

ರಾಜೀವ್ ಪ್ಯಾರಾ ಮೆಡಿಕಲ್ ಕಾಲೇಜಿನ ಶೈಕ್ಷಣಿಕ ಸಂಯೋಜಕ ಡಾ. ಎಸ್.ಎ.ನಿತಿನ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಕೌಶಲ ಹೆಚ್ಚಿಸಲು ಸಂಸ್ಥೆ ವತಿಯಿಂದ ನಿರಂತರ ಪ್ರಾಯೋಗಿಕ ಕಾರ್ಯಾಗಾರ ನಡೆಸಲಾಗುತ್ತಿದೆ. ನಲಿ-ಕಲಿ ಮಾದರಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಶಕ್ತಿ ಹೆಚ್ಚಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣದ ದೃಷ್ಟಿಯಿಂದ ಜಿಲ್ಲಾ ಮಟ್ಟದ ಮಾದರಿ ವಸ್ತು ಪ್ರದರ್ಶನ ಆಯೋಜಿಸಲಾಗುವುದು ಎಂದು ಹೇಳಿದರು.

ಮಾದರಿ ವಸ್ತುಪ್ರದರ್ಶನದಲ್ಲಿ ಅದ್ಭುತ ಮಾದರಿಗಳನ್ನು ತಯಾರಿಸಿ ವಿವರಣೆ ನೀಡಿದ ಎಂಟು ಗುಂಪಿನ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕಾಲೇಜಿನ ಶಾರೀರ ರಚನಾ ವಿಭಾಗದ ಮುಖ್ಯಸ್ಥ ಬಿ.ಎಸ್.ಪರಮೇಶ್, ಪೂರ್ಣವಿ, ನೂರ್ ಆಯೆಷಾ, ಕನಕಪ್ರಿಯಾ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.