ಅರಸೀಕೆರೆ ಕಡೂರಿನಲ್ಲಿ ಎಂಸಿಎಚ್ ಆಸ್ಪತ್ರೆ ಅಗತ್ಯ
ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಪ್ರತ್ಯೇಕ 100 ಹಾಸಿಗೆಗಳ ಮೆಟರನಲ್ ಅಂಡ್ ಚೈಲ್ಡ್ ಹೆಲ್ತ್ (ಎಂಸಿಎಚ್) ಆಸ್ಪತ್ರೆ ತೆರೆಯುವ ಅವಶ್ಯಕತೆ ಇದೆ ಎಂದು ಸಂಸದ ಶ್ರೇಯಸ್ ಸಚಿವರಿಗೆ ಮನವರಿಕೆ ಮಾಡಿದರು. ಅರಸೀಕೆರೆ ತಾಲ್ಲೂಕು ಅಧಿಕ ಜನಸಂಖ್ಯೆ ಹೊಂದಿದ್ದು ಸರ್ಕಾರದ ಆರೋಗ್ಯ ಸೇವೆಗಳ ಮೇಲೆ ಅವಲಂಬಿತವಾಗಿದೆ. ನಗರದಲ್ಲಿ ಎಂಸಿಎಚ್ ಆಸ್ಪತ್ರೆ ಇಲ್ಲ. ಗರ್ಭಿಣಿಯರು ಹಾಗೂ ಬಾಣಂತಿಯರು ಅಗತ್ಯ ಚಿಕಿತ್ಸೆಗಾಗಿ ಹಾಸನ ಅಥವಾ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ ಎಂದು ತಿಳಿಸಿದರು. ಕಡೂರು ತಾಲ್ಲೂಕಿನ ಸ್ಥಿತಿಯೂ ಇದೇ ರೀತಿಯಾಗಿದೆ. ತಾಲ್ಲೂಕು ದೊಡ್ಡದಾಗಿದ್ದು ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಸಮರ್ಪಕ ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ಇಲ್ಲ. ಮಹಿಳೆಯರು ಸುರಕ್ಷಿತ ಹೆರಿಗೆಯಾಗಿ ತುರ್ತು ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ಪಡೆಯಲು ದೂರದ ಊರಿಗೆ ಪ್ರಯಾಣಿಸಬೇಕಾಗಿದೆ. ಹೀಗಾಗಿ ಅರಸೀಕೆರೆ ಮತ್ತು ಕಡೂರಿನಲ್ಲಿ 100 ಹಾಸಿಗೆಗಳ ಎಂಸಿಎಚ್ ಆಸ್ಪತ್ರೆಗಳನ್ನು ಶೀಘ್ರ ಅನುಮೋದಿಸಬೇಕು ಎಂದು ಮನವಿ ಮಾಡಿದರು.