ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ ಫಲಿತಾಂಶ: ಜೆಡಿಎಸ್‌ ಕೋಟೆಯಲ್ಲಿ ಕಾಂಗ್ರೆಸ್‌ಗೆ ‘ಶ್ರೇಯಸ್ಸು’

43,756 ಮತಗಳ ಅಂತರದಿಂದ ಶ್ರೇಯಸ್‌ ಪಟೇಲ್‌ ಗೆಲುವು: ಎರಡು ದಶಕಗಳ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ
Published 4 ಜೂನ್ 2024, 22:52 IST
Last Updated 4 ಜೂನ್ 2024, 22:52 IST
ಅಕ್ಷರ ಗಾತ್ರ

ಹಾಸನ: ಲೈಂಗಿಕ ದೌರ್ಜನ್ಯ, ಪೆನ್ ಡ್ರೈವ್ ಹಂಚಿಕೆ ಸೇರಿದಂತೆ ಇಡೀ ದೇಶದ ಗಮನ ಸೆಳೆದಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ಸಿಗೆ ’ಶ್ರೇಯಸ್‌’ ಸಿಕ್ಕಿದೆ.​ ಪಕ್ಷದ ಅಭ್ಯರ್ಥಿ ಶ್ರೇಯಸ್​ ಪಟೇಲ್​ 43,756 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.  ಸಮೀಪದ ಪ್ರತಿಸ್ಪರ್ಧಿ, ಸದ್ಯ ಎಸ್​ಐಟಿ ವಶದಲ್ಲಿರುವ ಎನ್‌ಡಿ‌ಎ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ವಿರುದ್ಧ ಭಾರೀ ಅಂತರದ ಮತಗಳಿಂದ ಗೆಲವು ಸಾಧಿಸಿದ್ದಾರೆ. 

ಈ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಎರಡು ದಶಕಗಳ ಬಳಿಕ ಕಾಂಗ್ರೆಸ್​​ ಪಕ್ಷ ಗೆಲುವು ಸಾಧಿಸಿದೆ. ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಮುಖವಾಗಿ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಒಟ್ಟು 17,36,610 ಮತದಾರರ ಪೈಕಿ, ಏಪ್ರಿಲ್‌ 26 ರಂದು ನಡೆದ  ಚುನಾವಣೆಯಲ್ಲಿ 13,48,966 ಮತದಾರರು ಮತ ಚಲಾವಣೆ ಮಾಡಿದ್ದರು. ಶೇ 77.68 ರಷ್ಟು ಮತದಾನವಾಗಿತ್ತು.

ಮೊದಲ ಸುತ್ತಿನ ಎಣಿಕೆಯಲ್ಲಿ 3,522 ಮತಗಳ ಅಂತರದಿಂದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಮತ ಎಣಿಕೆಯ 3 ಮತ್ತು 4ನೇ ಸುತ್ತು ಮುಗಿದ ನಂತರ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್, ಪ್ರಜ್ವಲ್ ರೇವಣ್ಣ ವಿರುದ್ಧ 821 ಮತಗಳ ಅಲ್ಪ ಮುನ್ನಡೆ ಸಾಧಿಸಿದ್ದರು. 7ನೇ ಸುತ್ತಿನಲ್ಲಿ 2,55,311 ಮತಗಳನ್ನು ಪಡೆದಿದ್ದ ಪ್ರಜ್ವಲ್ ರೇವಣ್ಣ, 1,710 ಮತಗಳ ಮುನ್ನಡೆ ಸಾಧಿಸಿದರು. ಎಂಟನೇ ಸುತ್ತಿನಲ್ಲಿ 374 ಮತಗಳ ಮುನ್ನಡೆ ಕಾಯ್ದುಕೊಂಡ ಪ್ರಜ್ವಲ್, 9ನೇ ಸುತ್ತಿನಲ್ಲಿ ಶ್ರೇಯಸ್ ಪಟೇಲ್ ಅವರಿಗಿಂತ 5,749 ಮತಗಳ ಹಿನ್ನಡೆ ಅನುಭವಿಸಿದರು.

10 ಸುತ್ತಿನಲ್ಲಿಯೂ 4,14,183 ಮತಗಳನ್ನು ಪಡೆದ ಶ್ರೇಯಸ್‌ ಪಟೇಲ್‌, ಪ್ರಜ್ವಲ್ ರೇವಣ್ಣ ವಿರುದ್ಧ 13,859 ಮುನ್ನಡೆಯನ್ನು ಕಾಯ್ದುಕೊಂಡು ಬಂದರು. ಅಲ್ಲಿಂದ ಕೊನೆಯ ಸುತ್ತಿನವರೆಗೂ ಶ್ರೇಯಸ್ ಮುನ್ನಡೆ ಮುಂದುವರಿಯಿತು. ಅಂತಿಮ ಸುತ್ತಿನಲ್ಲಿ 6,70,599 ಮತಗಳನ್ನು ಪಡೆಯುವ ಮೂಲಕ 43,756 ಮತಗಳ ಅಂತರದಿಂದ ಶ್ರೇಯಸ್ ಪಟೇಲ್‌ ಗೆಲುವಿನ ನಗೆ ಬೀರಿದರು.

ಜೆಡಿಎಸ್ ಕೈತಪ್ಪಿದ ಬಿಗಿ ಹಿಡಿತ: ದೇವೇಗೌಡರ ಕುಟುಂಬದ ಬಿಗಿ ಹಿಡಿತದಿಂದ ಹಾಸನ ಕ್ಷೇತ್ರ ಕೈತಪ್ಪಿದಂತಾಗಿದೆ.

2019ರ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎ.ಮಂಜು 5,35,382 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. ಬಿಎಸ್ಪಿಯ ವಿನೋದ್ ರಾಜ್ ಕೆ.ಎಚ್ 38,761 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು 2019ರ ಚುನಾವಣೆಯಲ್ಲಿ ಜೆಡಿಎಸ್ ಶೇ.52.92ರಷ್ಟು ಮತಗಳನ್ನು ಪಡೆದಿತ್ತು.

2014ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 5,09,841 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಎ.ಮಂಜು 4,09,378 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಜೆಡಿಎಸ್ ಶೇ.44.44ರಷ್ಟು ಮತಗಳನ್ನು ಪಡೆದಿತ್ತು.

ಪಟಾಕಿ ಸಿಡಿಸಿ ಸಂಭ್ರಮ: ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ ಮಾಹಿತಿ ದೊರೆಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾವಿರಾರು ಮಂದಿ ಅಭಿಮಾನಿಗಳು ಎಣಿಕೆ ಕೇಂದ್ರದ ಹೊರಗಿನ ಡೈರಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಯೂ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಚನ್ನರಾಯಪಟ್ಟಣ, ಅರಕಲಗೂಡು, ಅರಸೀಕೆರೆ, ಸಕಲೇಶಪುರ, ಆಲೂರು ಸೇರಿದಂತೆ ಎಲ್ಲ ತಾಲ್ಲೂಕಿನಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಹೊಳೆನರಸೀಪುರದಲ್ಲು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಮತ ಎಣಿಕೆಗೆ ಬಿಗಿ ಭದ್ರತೆ: ಮತ ಎಣಿಕೆಗಾಗಿ ೪೦೦ ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿ ಪ್ರತಿ ಟೇಬಲ್ ನಲ್ಲಿ ಕೌಂಟಿಂಗ್ ಅಸಿಸ್ಟೆಂಟ್ ,ಕೌಂಟಿಂಗ್ ಸೂಪರ್ವೈಸರ್ ಸೇರಿ ಒಟ್ಟು ನಾಲ್ಕು ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು , ಭದ್ರತೆಗೆ 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು ,

ಮತ್ತೆ ಎಣಿಕೆಯ ಕೇಂದ್ರದ ಸುತ್ತ ಬ್ಯಾರಿಕೇಡ್ ಹಾಕುವ ಮೂಲಕ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಡೈರಿ ಸರ್ಕಲ್ ಸೇರಿದಂತೆ ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಙೆ ಜಾರಿದೊಂದಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಮರುಕಳಿಸಿದ 1999 ರ ಫಲಿತಾಂಶ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 1999 ರ ಫಲಿತಾಂಶ ಮರುಕಳಿಸಿದೆ. ಆಗಿನ ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಜಿ. ಪುಟ್ಟಸ್ವಾಮಿಗೌಡರು ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎಚ್‌.ಡಿ. ದೇವೇಗೌಡರನ್ನು 1.41 ಲಕ್ಷಗಳ ಅಂತರದಿಂದ ಸೋಲಿಸಿದ್ದರು. ಇದೀಗ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ದೇವೇಗೌಡರ ಮೊಮ್ಮಗ ಪ್ರಜ್ವಲ್‌ ವಿರುದ್ಧ 43 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುವ ಮೂಲಕ ತಾತನ ಸಾಧನೆ ಮರುಕಳಿಸುವಂತೆ ಮಾಡಿದ್ದಾರೆ.

ವರಿಷ್ಠರ ವಿಶ್ವಾಸ ಉಳಿಸಿಕೊಂಡ ಶ್ರೇಯಸ್‌

2023 ರ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ. ರೇವಣ್ಣ ಅವರ ವಿರುದ್ಧ ಅಲ್ಪ ಮತಗಳ ಅಂತರದಿಂದ ಶ್ರೇಯಸ್ ಪಟೇಲ್‌ ಸೋಲು ಅನುಭವಿಸಿದ್ದರು. ರೇವಣ್ಣ ಕುಟುಂಬದ ವಿರುದ್ಧ ಸ್ಪರ್ಧೆ ಮಾಡುವುದಕ್ಕೆ ಶ್ರೇಯಸ್ ಪಟೇಲ್‌ ಸೂಕ್ತ ಅಭ್ಯರ್ಥಿ ಎನ್ನುವ ಅಭಿಪ್ರಾಯ ಆಗಲೇ ಕಾಂಗ್ರೆಸ್‌ ನಾಯಕರಲ್ಲಿ ವ್ಯಕ್ತವಾಗಿತ್ತು. ಅದರಂತೆಯೇ ಈ ಬಾರಿ ಶ್ರೇಯಸ್‌ಗೆ ಟಿಕೆಟ್ ನೀಡಲಾಗಿತ್ತು. ಏಕಾಂಗಿಯಾಗಿಯೇ ಹೋರಾಟ ನಡೆಸಿದ ಶ್ರೇಯಸ್ ಪಟೇಲ್‌ ಕೊನೆಗೂ ವರಿಷ್ಠರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಸೂರಜ್‌ ಜೆಡಿಎಸ್ ನಾಲ್ವರು ಶಾಸಕರು ಬಿಜೆಪಿ ಇಬ್ಬರು ಶಾಸಕರು ಇರುವ ಹಾಸನದ ಕೋಟೆಯನ್ನು ಕೈವಶ ಮಾಡಿಕೊಂಡಿದ್ದಾರೆ.

ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಮತ ಎಣಿಕೆ ನಡೆಯಿತು.
ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಮತ ಎಣಿಕೆ ನಡೆಯಿತು.
ಮತ ಎಣಿಕೆಗಾಗಿ ಇವಿಎಂಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮತ ಎಣಿಕೆ ಸಿಬ್ಬಂದಿ.
ಮತ ಎಣಿಕೆಗಾಗಿ ಇವಿಎಂಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮತ ಎಣಿಕೆ ಸಿಬ್ಬಂದಿ.
ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತಾರಾ ಚಂದನ್‌ ಶ್ರೇಯಸ್‌ ತಾಯಿ ಅನುಪಮಾ ಅವರು ಗೆಲುವಿನ ಸಂಕೇತ ತೋರಿದರು.
ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತಾರಾ ಚಂದನ್‌ ಶ್ರೇಯಸ್‌ ತಾಯಿ ಅನುಪಮಾ ಅವರು ಗೆಲುವಿನ ಸಂಕೇತ ತೋರಿದರು.
ಮತ ಎಣಿಕೆ ನಡೆದ ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.
ಮತ ಎಣಿಕೆ ನಡೆದ ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.
ಹಾಸನದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ನೇತೃತ್ವದಲ್ಲಿ ಮಂಗಳವಾರ ಸ್ಟ್ರಾಂಗ್‌ ರೂಂನ ಬಾಗಿಲು ತೆರೆಯಲಾಯಿತು.
ಹಾಸನದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ನೇತೃತ್ವದಲ್ಲಿ ಮಂಗಳವಾರ ಸ್ಟ್ರಾಂಗ್‌ ರೂಂನ ಬಾಗಿಲು ತೆರೆಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT