ಸೋಮವಾರ, ಸೆಪ್ಟೆಂಬರ್ 27, 2021
22 °C
ಶಿಕ್ಷಣ ತಜ್ಞರು, ರಾಜಕೀಯ ಪಕ್ಷಗಳ ಜತೆ ಚರ್ಚಿಸಿ

ಹಾಸನ: ರಾಷ್ಟ್ರೀಯ ಶಿಕ್ಷಣ ನೀತಿ ಸ್ಥಗಿತಕ್ಕೆ ಸಿಪಿಎಂ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯದಲ್ಲಿ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ತಕ್ಷಣ ಸ್ಗಗಿತಗೊಳಿಸುವಂತೆ ಆಗ್ರಹಿಸಿ ಸಿಪಿಎಂ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡ ಭಾಷೆ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ. ಮಹಿಳೆಯರು, ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗದವರಿಗೆ  ಶಿಕ್ಷಣ ಮರೀಚಿಕೆಯಾಗಿಸುವ ಎನ್‌ಇಪಿಯನ್ನು ಕೂಡಲೇ ನಿಲ್ಲಿಸಬೇಕು. ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿದ ನಂತರ  ಜಾರಿಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಈ ನೀತಿಯು ಕನ್ನಡ, ತೆಲುಗು, ಉರ್ದು, ಮರಾಠಿ, ಕೊಂಕಣಿ ಸೇರಿದಂತೆ ಇತರೆ ಭಾಷೆಗಳ ಮೇಲೆ ಇಂಗ್ಲಿಷ್‌, ಸಂಸ್ಕೃತ, ಹಿಂದಿ ಭಾಷೆ ಹೇರುವ ಹುನ್ನಾರ ಹೊಂದಿದೆ. ಇದರಿಂದ ಭಾಷೆಗಳು ಮತ್ತಷ್ಟು  ಅಪಾಯ ಎದುರಿಸಲಿವೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಕಾರ್ಪೋರೇಟ್‌ ಕಂಪನಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಲೂಟಿಗೆ ರಾಜ್ಯವನ್ನು ತೆರೆಯುವ ಸಂಚಿನ ಭಾಗ ಇದು. ಇದರಿಂದ ಲಕ್ಷಾಂತರ ಅಂಗನವಾಡಿ ಕೇಂದ್ರಗಳು ಹಾಗೂ ವಿದ್ಯಾರ್ಥಿಗಳ ಕೊರತೆ ಎದುರಿಸುವ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಮುಚ್ಚಿ ಹೋಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬಾಣಂತಿಯರು, ಗರ್ಭಿಣಿಯರು ಹಾಗೂ ಅಪೌಷ್ಟಿಕ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಯೋಜನೆ
ಕಣ್ಮರೆ ಆಗಲಿದೆ. ಅಲ್ಲದೇ ವ್ಯಾಪಕ ನಿರುದ್ಯೋಗ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯೋಗ ಕಡಿತಕ್ಕೂ
ಕಾರಣವಾಗಲಿದೆ. ಮತ್ತಷ್ಟು ಚರ್ಚೆಗೆ ಒಳಪಡಿಸದೇ ಜಾರಿಗೊಳಿಸಬಾರದು ಎಂದು ಹೇಳಿದರು.

ರಾಜಕೀಯ ಪಕ್ಷಗಳು, ಶಿಕ್ಷಣ ತಜ್ಞರು, ಭಾಷಾ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿಶ್ವವಿದ್ಯಾಲಯಗಳ ಜೊತೆ ಚರ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲಿವರೆಗೂ ಯಾವುದೇ ಕಾರಣಕ್ಕೆ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಚ್.ಆರ್.ನವೀನ್ ಕುಮಾರ್, ಮುಖಂಡರಾದ ಜಿ.ಪಿ.ಸತ್ಯನಾರಾಯಣ, ಅರವಿಂದ್, ವಸಂತ್‌ಕುಮಾರ್, ಜಯಂತಿ, ರಮೇಶ್, ಶಶಿಕುಮಾರ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು