ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಸೂಚನೆ
Last Updated 6 ಡಿಸೆಂಬರ್ 2018, 16:58 IST
ಅಕ್ಷರ ಗಾತ್ರ

ಹಾಸನ: ಬರ ನಿರ್ವಹಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಚಿವ ಎಚ್.ಡಿ. ರೇವಣ್ಣ ಅವರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಹಲವು, ಸಲಹೆ, ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಪೂರೈಕೆ, ಎತ್ತಿನಹೊಳೆ ಯೋಜನೆ ಹಾಗೂ ರಸ್ತೆ ಕಾಮಗಾರಿಗಳಿಗೆ ಭೂಸ್ವಾಧೀನ ಪ್ರಕ್ರಿಯೆ, ಮರಳು ಪೂರೈಕೆಯಲ್ಲಿ ಅಗುತ್ತಿರುವ ವ್ಯತ್ಯಯ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು, ಹಲವು ನಿರ್ದೇಶನ ನೀಡಿದರು.

ಮುಂದಿನ ನಾಲ್ಕು ತಿಂಗಳು ಬೇಸಿಗೆ ಇದ್ದು, ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ಸಮಸ್ಯೆ ಉಂಟಾಗಬಾರದು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಈಗಲೇ ಯೋಜನೆ ರೂಪಿಸಿ ಅಗತ್ಯವಿರುವ ಕಡೆಗಳಲ್ಲಿ ಕೊಳವೆ ಬಾವಿ ಕೊರೆದು ಶಾಶ್ವತ ನೀರು ಪೂರೈಕೆಗೆ ಕ್ರಮವಹಿಸುವಂತೆ ಸಚಿವರು ಸೂಚಿಸಿದರು.

ಅಮೃತ ಯೋಜನೆಯಡಿ ನಗರದಲ್ಲಿ ನೀರು ಪೂರೈಕೆಗೆ ಈಗಾಗಲೇ ₹ 25 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ದೊರೆತಿದೆ. ಇನ್ನು ₹ 75 ಕೋಟಿ ರಾಜ್ಯ ಸರ್ಕಾರದಿಂದ ಲಭ್ಯವಾಗಲಿದ್ದು, ಶೀಘ್ರ ಕಾಮಗಾರಿ ಮುಕ್ತಾಯಗೊಳಿಸುವಂತೆ ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನೈಜ ರೈತರಿಗೆ ಸೂಕ್ತ ಪರಿಹಾರ ದೊರೆಯಬೇಕು, ಮಧ್ಯವರ್ತಿಗಳ ಹಾವಳಿ ನಿಲ್ಲಿಸಬೇಕು. ಕೆಲವು ಪ್ರದೇಶಗಳಲ್ಲಿ ಭೂಮಿಯ ಬೆಲೆಗಿಂತ ಹೆಚ್ಚು ದರ ನಿಗದಿ ಪಡಿಸಿದ್ದು ಕಾನೂನಿನ ತೊಡಕುಗಳಿವೆ. ಈ ಬಗ್ಗೆ ಕಾನೂನು ಇಲಾಖೆ ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಸಚಿವರು ಜಿಲ್ಲಾಧಿಕಾರಿ ರೋಹಿಣಿಗೆ ಹೇಳಿದರು.

ಮರಳು ಪೂರೈಕೆಯಲ್ಲಿ ವ್ಯತ್ಯಯವಾ ಗಿದೆ. ಅಶ್ರಯ ಮನೆ ಸೇರಿದಂತೆ ಸರ್ಕಾರಿ ಯೋಜನೆಗಳು ಹಾಗೂ ಖಾಸಗಿ ಕೆಲಸಗಳಿಗೆ ಮರಳು ಸಿಗುತ್ತಿಲ್ಲ. ಈ ಬಗ್ಗೆ ಕ್ರಮವಹಿಸುವಂತೆ ತಿಳಿಸಿದರು.

ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ‘ಹಲವು ಕಡೆ ಮರಳು ನಿಕ್ಷೇಪ ಗಳನ್ನು ಸಾರ್ವಜನಿಕರಿಗೆ ಬಳಸಲು ಕಾನೂನು ರೀತಿಯಲ್ಲಿ ಅವಕಾಶ ನೀಡಬೇಕು. ಇಲ್ಲವೇ ಅಕ್ರಮ ಸಾಗಣೆಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಈಗಾಗಲೇ ಮರಳು ನಿಕ್ಷೇಪಗಳನ್ನು ಗುರುತಿಸಲಾಗಿದೆ. ವಾಹನಗಳಿಗೆ ಜಿ.ಪಿ.ಎಸ್. ಅಳವಡಿಕೆ ಮಾಡಲಾಗುವುದು. ಅದಷ್ಟು ಬೇಗ ಸಾರ್ವಜನಿಕರಿಗೆ ಮರಳು ದೊರೆಯಲಿದೆ’ ಎಂದರು.
‘ಮರಳು ಅಕ್ರಮ ಸಾಗಾಣಿಕೆ ಬಗ್ಗೆಯೂ ನಿಗಾವಹಿಸಬೇಕು. ಚೆಕ್‌ಪೋಸ್ಟ್ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಮಾಡಬೇಕು’ ಎಂದು ಶಾಸಕ ಪ್ರೀತಂ ಗೌಡ ಸಲಹೆ ನೀಡಿದರು.

ಈ ಬಾರಿ ರೈತರೇ ನೇರವಾಗಿ ಆಲೂಗೆಡ್ಡೆ ಬಿತ್ತನೆ ಬೀಜ ಖರೀದಿಸಲಿ. ಅವರಿಗೆ ಶೇಕಡಾ 50 ರಷ್ಟು ಸಬ್ಸಿಡಿ ಹಣ ಒದಗಿಸಬೇಕು. ಮೊದಲೇ ಉಚಿತವಾಗಿ ಔಷಧಗಳ ವಿತರಣೆ ಮಾಡಬೇಕು ಎಂದು ರೇವಣ್ಣ ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರು ಬರ ನಿರ್ವಹಣೆಗೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೂ ಹೆಚ್ಚಿನ ಅನುದಾನ ಒದಗಿಸುವಂತೆ ಹಾಗೂ ರೈತರಿಗೆ ತುರ್ತು ಪರಿಹಾರ ದೊರಕಿಸುವಂತೆ ಕೋರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ಉಪ ವಿಭಾಗಾಧಿಕಾರಿಗಳಾದ ಲಕ್ಷ್ಮಿಕಾಂತ್ ರೆಡ್ಡಿ, ಎಚ್.ಎಲ್. ನಾಗರಾಜ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT