ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆಗೆ ಸ್ಫೋಟಕ ಬಳಕೆ: ಬಿರುಕು ಬಿಟ್ಟ ಗೋಡೆಗಳು

ಗಣಿಗಾರಿಕೆ ಸ್ಥಗಿತಗೊಳಿಸಿ: ಅರಕೆರೆ ಗ್ರಾಮಸ್ಥರ ಒತ್ತಾಯ
Last Updated 3 ಮೇ 2019, 14:56 IST
ಅಕ್ಷರ ಗಾತ್ರ

ಹಾಸನ: ‘ ಸ್ಫೋಟಕ ಬಳಸಿ ಬಂಡೆ ಸಿಡಿಸುತ್ತಿರುವ ಪರಿಣಾಮ ಮನೆಗಳ ಗೋಡೆಗಳು ಬಿರುಕು ಬಿಡುತ್ತಿದ್ದು, ತಕ್ಷಣ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಬೇಕು’ ಎಂದು ಜಾವಗಲ್ ಹೋಬಳಿಯ ಅರಕೆರೆ ಗ್ರಾಮಸ್ಥರು ಆಗ್ರಹಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ‘ ಗ್ರಾಮದ ಸರ್ವೆ ನಂಬರ್ 180 ಮತ್ತು ಬೈರಾಪುರ ಸರ್ವೆ ನಂ. 21 ರಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ನಡೆಸಲಾಗುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿಗೆ ಕಲ್ಲು ಗಣಿಗಾರಿಕೆ ನಡೆಸಲು ನಿರಾಕ್ಷೇಪಣಾ ಪತ್ರ ನೀಡದಂತೆ ಅರಕೆರೆ, ಕೆಂಚೇನಹಳ್ಳಿ, ಹೊಸಹಟ್ಟಿ, ಕೋರನಹಳ್ಳಿ ಕೊಪ್ಪಲು, ಬೆಳುವಳ್ಳಿ, ಕೋಳಗುಂದ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ನೀಡಲಾಗಿದೆ. ಇದರಿಂದ ಜನ, ಜಾನುವಾರುಗಳಿಗೆ ನೆಮ್ಮದಿ ಇಲ್ಲದಂತಾಗಿದೆ’ ಎಂದು ಅಳಲು ತೋಡಿಕೊಂಡರು.

ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಕಲ್ಲು ಗಣಿಗಾರಿಕೆಯನ್ನು ತಾತ್ಕಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ, ಈಗ ಮತ್ತೆ ಅಕ್ರಮವಾಗಿ ಪ್ರಾರಂಭಿಸಲಾಗಿದೆ. ರಾತ್ರಿ ವೇಳೆ ಜಲ್ಲಿ, ಎಂ. ಸ್ಯಾಂಡ್ ಅನ್ನು ಟಿಪ್ಪರ್, ಟ್ರ್ಯಾಕ್ಟರ್ ಮತ್ತು ಲಾರಿಗಳ ಮೂಲಕ ಸಾಗಣಿಕೆ ಮಾಡಲಾಗುತ್ತಿದೆ’ ಎಂದು ದೂರಿದರು.

‘ಸುತ್ತಮುತ್ತಲ ಗ್ರಾಮಗಳ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಭೂಕಂಪನದ ಅನುಭವವಾಗುತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದ್ದು, ಜನ-ಜಾನುವಾರುಗಳ ಬದುಕು ಕಷ್ಟವಾಗುತ್ತಿದೆ. ಸ್ಫೋಟದ ಶಬ್ಧಕ್ಕೆ ಕಾಡು ಪ್ರಾಣಿಗಳು ಗ್ರಾಮದ ಕಡೆ ಬರುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ದೂರು ಸಲ್ಲಿಸಲಾಗಿತ್ತು. ಅವರು ವರ್ಗಾವಣೆ ಆದ ಬಳಿಕ ಮತ್ತೆ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ನೂತನ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಗ್ರಾಮದ ಉಳಿವಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನಿಯೋಗದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೃತ್ಯುಂಜಯ, ಸದಸ್ಯ ರಾಜ್ ಬೇಗ್, ಮುಖಂಡರಾದ ಶಂಕರಪ್ಪ , ತೇಜಮೂರ್ತಿ, ಗಂಗಾಧರ್, ಶಿವಣ್ಣ, ದಯಾನಂದ ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT