ಬುಧವಾರ, ಡಿಸೆಂಬರ್ 2, 2020
16 °C
ರಾಜ್ಯ ಸರ್ಕಾರಕ್ಕೆ ಶಾಸಕ ಎಚ್.ಡಿ.ರೇವಣ್ಣ ಒತ್ತಾಯ

ವಿದ್ಯುತ್‌ ದರ ಏರಿಕೆಗೆ ತಡೆ ನೀಡಿ: ಎಚ್.ಡಿ.ರೇವಣ್ಣ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯದಲ್ಲಿ ಉಪಚುನಾವಣೆ ಮುಗಿದ ಬಳಿಕ ವಿದ್ಯುತ್‌ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿರುವ ಶಾಸಕ ಎಚ್.ಡಿ.ರೇವಣ್ಣ, ಜನರು ಕೋವಿಡ್‌ 19 ಸಂಕಷ್ಟದಲ್ಲಿರುವುದರಿಂದ ಕೂಡಲೇ ದರ ಏರಿಕೆಗೆ ತಡೆ ನೀಡಬೇಕು ಎಂದು ಒತ್ತಾಯಿಸಿದರು.

ಎಲ್ಲ ಎಸ್ಕಾಂಗಳಿಂದ ಆಗಿರುವ ₹7,996 ಕೋಟಿ ನಷ್ಟವನ್ನು ಸರಿದೂಗಿಸಲು ಹೀಗೆ ಮಾಡಲಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಆರ್‌ಇಸಿ) ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ನ.1ರಿಂದಲೇ ಅನ್ವಯವಾಗಲಿದೆ. ಹತ್ತು ವರ್ಷದ ಹತ್ತು ಬಾರಿ ಕಾಂಗ್ರೆಸ್‌, ಬಿಜೆಪಿ ಸರ್ಕಾರಗಳು ದರ ಹೆಚ್ಚಿಸಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಎಸ್ಕಾಂಗಳು ₹4 ರಿಂದ 5 ಸಾವಿರ ಕೋಟಿ ನಷ್ಟದಲ್ಲಿವೆ. ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆದಿದೆ. ಗ್ರಾಮೀಣ ಭಾಗದಲ್ಲಿ ಟ್ರಾನ್ಸ್‌ಫಾರ್ಮಾರ್‌ ಅಳವಡಿಸಲು ₹18 ಸಾವಿರ ಲಂಚ ನೀಡಬೇಕು. ನಾನು ಸಚಿವನಾಗಿದ್ದಾಗ ಬೆಸ್ಕಾಂನಲ್ಲಿ ₹500 ಕೋಟಿ ಠೇವಣಿ ಇರಿಸಿದ್ದೆ. ಪ್ರತಿ ಮನೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಂಡಿದೆ. ಈಗ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರ ಬಿಲ್‌ ಮೂರು ಸಾವಿರ ಕೋಟಿ ಬಾಕಿ ಇದೆ. ಇಂಧನ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ. ಮೀಟರ್‌ ಖರೀದಿ ಸೇರಿದಂತೆ ಹತ್ತು ವರ್ಷದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಸತ್ಯ ಬಯಲಾಗುತ್ತದೆ. ನೀರಾವರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಬೆಂಗಳೂರು ಕಚೇರಿಯಲ್ಲಿ ಬಿಲ್‌ ಪಾಸ್‌ ಮಾಡಲು ಹನ್ನೇರಡು ಪರ್ಸೆಂಟ್‌ ಕಮಿಷನ್‌ ನೀಡಬೇಕು. ಅಲ್ಲದೇ ಸ್ಥಳೀಯ ಎಂಜಿನಿಯರ್‌ಗಳಿಗೆ ಐದು ಪರ್ಸೆಂಟ್ ನೀಡಬೇಕು ಎಂದು ಆರೋಪಿಸಿದರು.

ಪತ್ನಿ ಆಭರಣಗಳನ್ನು ಅಡವಿಟ್ಟು ಬಡ್ಡಿಗೆ ಹಣ ತಂದು ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಇನ್ನು ಹಣ ಬಿಡುಗಡೆ ಮಾಡಿಲ್ಲ. ಭ್ರಷ್ಟಾಚಾರ ಖಂಡಿಸಿ ನೀರಾವರಿ ಇಲಾಖೆ ಎದುರು ಧರಣಿ ನಡೆಸುತ್ತೇನೆ. ಬೇಕಾದರೆ ಬಂಧಿಸಲಿ ಎಂದು ಸವಾಲು ಹಾಕಿದರು.

48 ಸಾವಿರ ಕುಟುಂಬಗಳಿಗೆ ಪಿಂಚಣಿ ತಲುಪಿಲ್ಲ. ಸರ್ಕಾರಿ ಶಾಲೆ, ಕಾಲೇಜುಗಳನ್ನು ಮುಚ್ಚಲಾಗುತ್ತಿದೆ. ಇದರಿಂದಾಗಿ ಬಡವರಿಗೆ ಶಿಕ್ಷಣ ಸಿಗುವುದು ಕಷ್ಟವಾಗಲಿದೆ. ಶಾಲಾ, ಕಾಲೇಜುಗಳಿಗೆ ಮೂಲಸೌಲಭ್ಯ ಒದಗಿಸಿಲ್ಲ. ‌ಶಿಕ್ಷಕರ ನೇಮಕಾತಿ ನಡೆದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಕರ ನೇಮಕಾತಿ ನಡೆದಿರುವುದೇ ಕೊನೆ. ಬಡ ಮಕ್ಕಳಿಗೂ ಶಿಕ್ಷಣ ದೊರೆಯಬೇಕು ಎಂದರು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು